ADVERTISEMENT

ನ್ಯಾಯಾಲಯ ನಿರ್ದೇಶನ: ಸಂತ್ರಸ್ತೆ ಪರಿಹಾರಕ್ಕಾಗಿ ಅಪರಾಧಿ ಆಸ್ತಿ ಮಾರಾಟ!

₹91 ಲಕ್ಷಕ್ಕೆ ಕೃಷಿ ಜಮೀನು ಮಾರಾಟ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 18:31 IST
Last Updated 15 ನವೆಂಬರ್ 2018, 18:31 IST
   

ಚಂಡೀಗಡ: ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಗೆ ಪರಿಹಾರ ನೀಡಲು ಅಪರಾಧಿಯ ಆಸ್ತಿಯನ್ನು ಸರ್ಕಾರವೇ ಮಾರಾಟ ಮಾಡಿರುವ ಅಪರೂಪದ ಪ್ರಕರಣ ಇಲ್ಲಿ ನಡೆದಿದೆ.

ಅಪರಾಧಿಯ ಆಸ್ತಿಯನ್ನು ಸರ್ಕಾರ ₹91 ಲಕ್ಷಕ್ಕೆ ಮಾರಾಟ ಮಾಡಿದೆ. ಈ ಮೊತ್ತವನ್ನು ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ನೀಡಲು ನಿರ್ಧರಿಸಲಾಗಿದೆ.

2012ರಲ್ಲಿ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಕೃತ್ಯಕ್ಕಾಗಿ ನಿಶಾನ್‌ ಸಿಂಗ್‌ ಎಂಬಾತ ಈಗ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಕೆಲವು ವಾರಗಳ ಹಿಂದೆ ನಿಶಾನ್‌ ಸಿಂಗ್‌ನ ಆಸ್ತಿ ಹರಾಜು ಹಾಕಲು ಸಿದ್ಧತೆ ಕೈಗೊಳ್ಳಲಾಗಿತ್ತು. ಆದರೆ, ಯಾವುದಾದರೂ ಸಮಸ್ಯೆಗಳು ಎದುರಾಗಬಹುದು ಎಂದು ಭಾವಿಸಿಕೊಂಡು ಹರಾಜಿನಲ್ಲಿ ಯಾರೂ ಪಾಲ್ಗೊಂಡಿರಲಿಲ್ಲ.

ADVERTISEMENT

ಮಂಗಳವಾರ ನಡೆದ ಹರಾಜಿನಲ್ಲಿಯೂ ಯಾರೂ ಬಿಡ್ಡರ್‌ಗಳು ಪಾಲ್ಗೊಳ್ಳಲಿಲ್ಲ. ಹೀಗಾಗಿ, ಪಂಜಾಬ್‌ನ ಫರೀದ್‌ಕೋಟ್‌ ಜಿಲ್ಲಾ ರೆಡ್‌ ಕ್ರಾಸ್‌ ಸೊಸೈಟಿಯು ನಿಶಾನ್‌ ಸಿಂಗ್‌ ಮತ್ತು ಆತನ ತಾಯಿಯ ಹೆಸರಿನಲ್ಲಿದ್ದ 4 ಎಕರೆ ಕೃಷಿ ಜಮೀನು ಖರೀದಿಸಿತು.

ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಈ ಆಸ್ತಿ ಮಾರಾಟ ಮಾಡಲಾಗಿದೆ. ಸಂತ್ರಸ್ತೆಗೆ ₹90 ಲಕ್ಷ ಪರಿಹಾರ ನೀಡಬೇಕು ಎಂದು ಅಪರಾಧಿಗೆ ನ್ಯಾಯಾಲಯ ನಿರ್ದೇಶನ ನೀಡಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಅಪರಾಧಿಯ ಕೃಷಿ ಜಮೀನು ಮತ್ತು ವಾಸಸ್ಥಳಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಗೆ ₹50ಲಕ್ಷ ಪರಿಹಾರ ದೊರೆಯಲಿದ್ದು, ಉಳಿದ ₹40 ಲಕ್ಷ ಮೊತ್ತವನ್ನು ಸಂತ್ರಸ್ತೆಯ ಪೋಷಕರಿಗೆ ನೀಡಲು ನಿರ್ಧರಿಸಲಾಗಿದೆ. 2012ರ ಸೆಪ್ಟೆಂಬರ್‌ 24ರಂದು ಫರೀದಕೋಟ್‌ನಲ್ಲಿ ನಿಶಾನ್‌ಸಿಂಗ್‌ ಮತ್ತು ಆತನ ಸಹಚರರು ಹತ್ತನೇ ತರಗತಿ ವಿದ್ಯಾರ್ಥಿನಿಗೆ ಬಂದೂಕಿನಿಂದ ಬೆದರಿಕೆ ಹಾಕಿ ಹೊರಗೆ ಎಳೆದು ಕಾರಿನಲ್ಲಿ ಕೂಡಿಹಾಕಿದ್ದರು. ಬಳಿಕ, ವಿದ್ಯಾರ್ಥಿನಿಯ ಪೋಷಕರನ್ನು ಸಹ ಥಳಿಸಿ ಗಾಳಿಯಲ್ಲಿ ಗುಂಡು ಹಾರಿಸಿ ವಿದ್ಯಾರ್ಥಿನಿ ಜತೆ ಪರಾರಿಯಾಗಿದ್ದರು. ಒಂದು ತಿಂಗಳ ಬಳಿಕ ವಿದ್ಯಾರ್ಥಿನಿಯನ್ನು ಗೋವಾದಲ್ಲಿ ಪತ್ತೆ ಮಾಡಲಾಗಿತ್ತು. ಅತ್ಯಾಚಾರವೆಸಗಿದ್ದರಿಂದ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಳು. ನ್ಯಾಯಾಲಯದ ಅನುಮತಿ ಪಡೆದು ಗರ್ಭಪಾತ ಮಾಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.