ADVERTISEMENT

ಪಕ್ಷಕ್ಕೆ ಹೊಸ ಕಳೆ ತಂದ ಅಖಿಲೇಶ್

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST

ಲಖನೌ (ಪಿಟಿಐ): ಮುಲಾಯಂ ನೇತೃತ್ವದ ಸಮಾಜವಾದಿ ಪಕ್ಷವು ಹಳೆಯ ಚಿಂತನೆ, ಧರ್ಮ ಹಾಗೂ ಜಾತಿ ಆಧಾರಿತ ರಾಜಕೀಯ, ಗೂಂಡಾಗಿರಿಯ ಪಾರುಪತ್ಯಕ್ಕೆ ಹೆಸರಾದದ್ದು. ಈ ನಂಬಿಕೆಯನ್ನು ಮುರಿದು ಪಕ್ಷಕ್ಕೊಂದು ಹೊಸ ವರ್ಚಸ್ಸು ನೀಡುವಲ್ಲಿ ಅಖಿಲೇಶ್ ಯಶ ಕಂಡಿದ್ದಾರೆ.
 
ಇಂಗ್ಲಿಷ್ ಹಾಗೂ ಕಂಪ್ಯೂಟರ್ ಎಂದರೆ ಮಾರು ದೂರ ಸರಿಯುತ್ತಿದ್ದ ಪಕ್ಷದಲ್ಲಿ ಈಗ ಆಧುನಿಕತೆಯ ಗಂಧ ಗಾಳಿ ತೀಡಿದೆ. ಯುವ ನಾಯಕನ ಸಾರಥ್ಯದಲ್ಲಿ ಹೊಸ ನೀರು ಹರಿಯುತ್ತಿದೆ. ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಟಿಕೆಟ್ ನಿರಾಕರಿಸುವ ಮೂಲಕ ಅಖಿಲೇಶ್, ಎಸ್‌ಪಿಗೆ ಅಂಟಿದ `ಗೂಂಡಾ ಪಕ್ಷ~ಎಂಬ ಕಳಂಕವನ್ನೂ ಅಳಿಸಿ ಹಾಕಲು ಪ್ರಯತ್ನಿಸಿದ್ದಾರೆ.

1973ರ ಜುಲೈನಲ್ಲಿ ಹುಟ್ಟಿದ ಅಖಿಲೇಶ್, ರಾಜಸ್ತಾನದ ಸೇನಾ ಶಾಲೆಯಲ್ಲಿ ಆರಂಭಿಕ ವಿದ್ಯಾಭ್ಯಾಸ ಪೂರೈಸಿದ್ದಾರೆ. ನಂತರದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎನ್ವಿರಾನ್‌ಮೆಂಟ್ ಎಂಜಿನಿಯರಿಂಗ್ ಪದವಿ. 1998ರಲ್ಲಿ ಸಿಡ್ನಿಯಲ್ಲಿ ಸ್ನಾತಕೋತ್ತರ ಎಂಜಿನಿಯರಿಂಗ್ ಪದವಿ.

ತಂದೆ ಮುಲಾಯಂ ಅವರ ಒತ್ತಾಯಕ್ಕೆ ರಾಜಕೀಯ ಸೇರಿದ ಅಖಿಲೇಶ್, 2000ದಲ್ಲಿ ಕನೌಜ್ ಕ್ಷೇತ್ರದ ಪ್ರತಿನಿಧಿಯಾಗಿ ಲೋಕಸಭೆಗೆ ಕಾಲಿಟ್ಟಾಗ ಆಗಿನ್ನೂ ಅವರಿಗೆ 27 ವರ್ಷ.

 ಈ ಬಾರಿ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ದೃಢ ಸಂಕಲ್ಪ ಮಾಡಿದ ಅವರು, ಕಳೆದ 6 ತಿಂಗಳಿನಲ್ಲಿ ರಾಜ್ಯದಾದ್ಯಂತ 800 ರ‌್ಯಾಲಿಗಳನ್ನು ನಡೆಸಿದರು. 10,000 ಕಿ.ಮೀ ಯಾತ್ರೆ ಕೈಗೊಂಡರು. ಈ ಹಂತದಲ್ಲಿಯೇ ನಿಧಾನವಾಗಿ ಪಕ್ಷದ ವರ್ಚಸ್ಸು ಬದಲಿಸುವ ಕೆಲಸ ಮಾಡಿದರು. ಕೊನೆಗೂ ಚುನಾವಣೆಯಲ್ಲಿ `ಅಖಿಲೇಶ್ ಅಲೆ~ ಮತದಾರರನ್ನು ಮೋಡಿ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.