ADVERTISEMENT

ಪಕ್ಷಗಳಿಗೆ ಆರ್‌ಟಿಐ ಇಲ್ಲ

ಕೇಂದ್ರ ಸಚಿವ ಸಂಪುಟದ ಮಹತ್ವದ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ನವದೆಹಲಿ: ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಯಿಂದ ಹೊರಗಿಡಲು, ಕಾಯ್ದೆಗೆ ಅಗತ್ಯ ತಿದ್ದುಪಡಿ ಮಾಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತು. ಸೋಮವಾರದಿಂದ ಆರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಿ, ಅನುಮೋದನೆ ಪಡೆಯಲು ಉದ್ದೇಶಿಸಿದೆ.

ಪ್ರಧಾನಿ ಮನಮೋಹನ್‌ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ, ಮಾಹಿತಿ ಹಕ್ಕು ಕಾಯ್ದೆ ಬದಲಾವಣೆ ಮಾಡುವ ತೀರ್ಮಾನ ಕೈಗೊಂಡಿತು ಎಂದು ಅಧಿಕೃತ ಮೂಲ ತಿಳಿಸಿವೆ. ಕಾಂಗ್ರೆಸ್, ಬಿಜೆಪಿ, ಸಿಪಿಐ, ಸಿಪಿಎಂ, ಎನ್‌ಸಿಪಿ ಹಾಗೂ ಬಿಎಸ್‌ಪಿ ಸೇರಿದಂತೆ ಆರು ರಾಷ್ಟ್ರೀಯ ಪಕ್ಷಗಳು ಪರೋಕ್ಷವಾಗಿ ಸರ್ಕಾರದ ನೆರವು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಡುತ್ತವೆ ಎಂದು ಕೇಂದ್ರ ಮಾಹಿತಿ ಹಕ್ಕು ಆಯೋಗ ಜೂನ್ ತಿಂಗಳಲ್ಲಿ ಹೇಳಿತ್ತು.

ಸಾರ್ವಜನಿಕವಾಗಿ ವ್ಯಾಪಕ ಚರ್ಚೆಗೊಳಗಾದ ಈ ತೀರ್ಪು ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೊಳಗಾಯಿತು. ಪಾರದರ್ಶಕ ಕಾಯ್ದೆ ಜಾರಿಗೆ ತಂದ ಹೆಗ್ಗಳಿಕೆ ಪಡೆದ ಕಾಂಗ್ರೆಸ್ ಕೂಡಾ ಆಯೋಗದ ತೀರ್ಪನ್ನು ವಿರೋಧಿಸಿತು. ಮಾಹಿತಿ ಹಕ್ಕು ಕಾಯ್ದೆ ಜಾರಿ ಹೊಣೆ ಹೊತ್ತಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಕಾನೂನು ಸಚಿವಾಲಯದ ಜತೆ ಸಮಾಲೋಚಿಸಿ ಕಾಯ್ದೆ ತಿದ್ದುಪಡಿಗೆ ಮುಂದಾಯಿತು. ಕಾಯ್ದೆಯಲ್ಲಿ ಉಲ್ಲೇಖಿಸಿರುವ `ಸಾರ್ವಜನಿಕ ಅಧಿಕಾರ'ದ ವ್ಯಾಖ್ಯಾನ  ಬದಲಾಯಿಸಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳನ್ನು ಇದರಿಂದ ಹೊರಗಿಡಲು ಸರ್ಕಾರ ಉದ್ದೇಶಿಸಿದೆ ಎಂದು ಮೂಲಗಳು ವಿವರಿಸಿವೆ.

ಜನರಿಗೆ ನಿಗದಿತ ಕಾಲಮಿತಿಯೊಳಗೆ ಸರ್ಕಾರ ಮತ್ತು ಆಡಳಿತಕ್ಕೆ ಸಂಬಂಧಿಸಿದ ವಿಷಯಗಳ ಮಾಹಿತಿ ಪಡೆಯುವ ಅಧಿಕಾರವನ್ನು ಮಾಹಿತಿ ಹಕ್ಕು ಕಾಯ್ದೆಯು ನೀಡಿದೆ. ಇದಕ್ಕೆ ಹತ್ತು ರೂಪಾಯಿ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬೇಕು.

ಎಫ್‌ಡಿಐ ನೀತಿ; ಇನ್ನಷ್ಟು ಸಡಿಲ:  ವಾಲ್‌ಮಾರ್ಟ್, ಟೆಸ್ಕೊ ಸೇರಿದಂತೆ  ಬಹುರಾಷ್ಟ್ರೀಯ ಕಂಪೆನಿಗಳನ್ನು ಸೆಳೆಯುವ ಸಲುವಾಗಿ ಕೇಂದ್ರ ಸರ್ಕಾರವು ಬಹು ಬ್ರಾಂಡ್ ಚಿಲ್ಲರೆ ಮಾರಾಟ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿಯನ್ನು ಮತ್ತಷ್ಟು ಸಡಿಲಿಸಿದೆ. ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಬಹು ಬ್ರಾಂಡ್ ಚಿಲ್ಲರೆ ವಹಿವಾಟು ಪರಿಧಿಗೆ ಹತ್ತು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರಗಳನ್ನೂ ಸೇರಿಸಿಕೊಳ್ಳಲು ಸಂಪುಟವು ರಾಜ್ಯಗಳಿಗೆ ಅನುಮತಿ ನೀಡಿದೆ. `ಬಹು ಬ್ರಾಂಡ್ ಚಿಲ್ಲರೆ ಮಾರಾಟ ನೀತಿಯು ಹೆಚ್ಚು ಪಾರದರ್ಶಕವೂ, ಹೂಡಿಕೆದಾರರ ಸ್ನೇಹಿಯೂ ಆಗಿದೆ' ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಆನಂದ್ ಶರ್ಮ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.