ADVERTISEMENT

‘ಪತಿ–ಪತ್ನಿ ಒಪ್ಪಿದರಷ್ಟೇ ವಿಡಿಯೊ ಕಾನ್ಫರೆನ್ಸ್‌’

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 19:30 IST
Last Updated 9 ಅಕ್ಟೋಬರ್ 2017, 19:30 IST

ನವದಹೆಲಿ: ಗಂಡ–ಹೆಂಡತಿಯರ ನಡುವಣ ಸಂಘರ್ಷದ ವಿಚಾರಣೆಯನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಸಬೇಕಾದರೆ ಅದಕ್ಕೆ ಇಬ್ಬರೂ ಒಪ್ಪಿಗೆ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಇಬ್ಬರಲ್ಲಿ ಒಬ್ಬರು ಒಪ್ಪಿದರೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಬಹುದು ಎಂದು ಕೃಷ್ಣವೇಣಿ ನಾಗಮ್‌ ಪ್ರಕರಣದಲ್ಲಿ ತೀರ್ಪು ನೀಡಲಾಗಿತ್ತು. ಈ ತೀರ್ಪ‍ನ್ನು ರದ್ದುಪಡಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಈ ತೀರ್ಪು ನೀಡಿದೆ. ಆದರೆ ಪೀಠದಲ್ಲಿದ್ದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಈ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರತ್ಯೇಕ ತೀರ್ಪು ಬರೆದಿರುವ ಅವರು, ಕೌಟುಂಬಿಕ ವಿವಾದಗಳ ವಿಚಾರಣೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಡಿಯೊ ಕಾನ್ಫರೆನ್ಸ್‌ ಬಳಸಲಾಗುತ್ತಿದೆ. ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಬಹುದೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಕೌಟುಂಬಿಕ ನ್ಯಾಯಾಲಯಕ್ಕೇ ಬಿಡಬೇಕು. ಆಯಾ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ADVERTISEMENT

ಕೌಟುಂಬಿಕ ಸಂಘರ್ಷದ ವಿಚಾರಣೆಯನ್ನು ನ್ಯಾಯಾಧೀಶರ ಕೋಣೆಯಲ್ಲಿ ನಡೆಸಲಾಗುತ್ತದೆ. ಇದು ಬಹಿರಂಗವಾಗಿ ಚರ್ಚಿಸುವಂತಹ ವಿಚಾರ ಅಲ್ಲ. ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಯುವ ವಿಚಾರಣೆಯಲ್ಲಿ ಗೋಪ್ಯತೆ ಕಾಯುವುದು ಕಷ್ಟ ಎಂಬ ವಾದವನ್ನೂ ಚಂದ್ರಚೂಡ್‌ ಅವರು ಒಪ್ಪಿಲ್ಲ. ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಯುವ ವಿಚಾರಣೆಯಲ್ಲಿ ಗೋಪ್ಯತೆ ಕಾಯವುದು ಸಾಧ್ಯವಿಲ್ಲ ಎಂಬುದು ತಪ್ಪು ಗ್ರಹಿಕೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.