ನವದೆಹಲಿ: ತುಮಕೂರು, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಗಣಿಗಾರಿಕೆಗೆ ನಡೆಸಲು ಗುತ್ತಿಗೆ ಪಡೆದಿರುವ ಪ್ರತಿ ಕಂಪೆನಿಯೂ, ಅದಿರು ಮಾರಾಟದಿಂದ ಬಂದ ಶೇಕಡ 10ರಷ್ಟು ಮೊತ್ತವನ್ನು ಪರಿಸರ ಪುನಶ್ಚೇತನಕ್ಕೆ ಆರಂಭಿಸಲಾದ ನಿಗಮಕ್ಕೆ ನೀಡಬೇಕು ಎಂಬ ಆದೇಶದಲ್ಲಿ ಬದಲಾವಣೆ ತರಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಗಣಿಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳು ಕೆಟ್ಟ ಪರಿಣಾಮಗಳನ್ನು ಬೀರುತ್ತವೆ. ಇದನ್ನು ಸರಿಪಡಿಸಬೇಕು. ಪರಿಸರಕ್ಕೆ ಆಗುವ ಹಾನಿಯನ್ನು ಕಡಿಮೆ ಮಾಡಬೇಕು ಎಂದು ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ತ್ರಿಸದಸ್ಯ ಪೀಠ ಹೇಳಿತು.
ಸಮಾಜ ಪರಿವರ್ತನ ಸಮುದಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಅನ್ವಯ ರಾಜ್ಯ ಸರ್ಕಾರವು ‘ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ’ವನ್ನು 2014ರಲ್ಲಿ ಆರಂಭಿಸಿದೆ.