ADVERTISEMENT

ಪರಿಸರ ಮಾಲಿನ್ಯಕ್ಕೆ ಸುಪ್ರೀಂ ಚಾಟಿ: ಸ್ಟೆರ್ಲೈಟ್ ಇಂಡಸ್ಟ್ರೀಸ್ ಗೆ ರೂ.100 ಕೋಟಿ ದಂಡ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 9:59 IST
Last Updated 2 ಏಪ್ರಿಲ್ 2013, 9:59 IST
ಪರಿಸರ ಮಾಲಿನ್ಯಕ್ಕೆ ಸುಪ್ರೀಂ ಚಾಟಿ: ಸ್ಟೆರ್ಲೈಟ್ ಇಂಡಸ್ಟ್ರೀಸ್ ಗೆ ರೂ.100 ಕೋಟಿ ದಂಡ
ಪರಿಸರ ಮಾಲಿನ್ಯಕ್ಕೆ ಸುಪ್ರೀಂ ಚಾಟಿ: ಸ್ಟೆರ್ಲೈಟ್ ಇಂಡಸ್ಟ್ರೀಸ್ ಗೆ ರೂ.100 ಕೋಟಿ ದಂಡ   

ನವದೆಹಲಿ (ಪಿಟಿಐ): ತಮಿಳುನಾಡಿನಲ್ಲಿನ ತನ್ನ ತಾಮ್ರ ಶುದ್ಧೀಕರಣ ಘಟಕದ ಮೂಲಕ ಪರಿಸರ ಮಾಲಿನ್ಯ ಮಾಡುತ್ತಿರುವುದಕ್ಕಾಗಿ 100 ಕೋಟಿ ರೂಪಾಯಿಗಳ ಪರಿಹಾರ ನೀಡುವಂತೆ ವೇದಾಂತ ಸಮೂಹದ ಸ್ಟೆರ್ಲೈಟ್ ಇಂಡಸ್ಟ್ರೀಸ್ ಕಂಪೆನಿಗೆ ಸುಪ್ರೀಂಕೋರ್ಟ್ ಮಂಗಳವಾರ ಆಜ್ಞಾಪಿಸಿದೆ.

ಈ ದಂಡದ ಜೊತೆಗೆ ದೀರ್ಘಕಾಲದಿಂದ ಪರಿಸರ ಕಾಳಜಿ ವಹಿಸದೇ ಇದ್ದುದಕ್ಕಾಗಿ ಘಟಕವನ್ನು ಮುಚ್ಚುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಹಿಂದಿನ ಆದೇಶವನ್ನೂ ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ.

ಪರಿಹಾರವನ್ನು ಐದು ವರ್ಷಗಳ ಅವಧಿಯಲ್ಲಿ ಪಾವತಿ ಮಾಡಬೇಕು ಎಂದು ನ್ಯಾಯಾಲಯವು ಸೂಚಿಸಿತು.

'ಪರಿಹಾರವು ನಿರೋಧಕದಂತೆ ಕೆಲಸ ಮಾಡಬೇಕು. 100 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಯಾವುದೇ ದಂಡವು ಅಪೇಕ್ಷಿತ ಪರಿಣಾಮವನ್ನು ಬೀರಲಾರದು' ಎಂದು ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್ ನೇತೃತ್ವದ ಪೀಠ ಹೇಳಿತು.

ವಿಷಾನಿಲ ಸೋರಿಕೆ ಹಿನ್ನೆಲೆಯಲ್ಲಿ ತೂತುಕುಡಿಯ ತನ್ನ ತಾಮ್ರ ಶುದ್ಧೀಕರಣ ಘಟಕವನ್ನು ಮುಚ್ಚುವಂತೆ ನಿರ್ದೇಶಿಸಿ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಇತ್ತೀಚೆಗೆ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸ್ಟೆರ್ಲೈಟ್ ಇಂಡಸ್ಟ್ರೀಸ್ ಸೋಮವಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮುಂದೆ ಮೇಲ್ಮನವಿ ಸಲ್ಲಿಸಿತ್ತು.

ತೂತುಕುಡಿ ಪಟ್ಟಣದಲ್ಲಿನ ತನ್ನ ಘಟಕಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ ತಮಿಳುನಾಡು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಇನ್ನೊಂದು ಆದೇಶವನ್ನೂ ಕಂಪೆನಿ ಪ್ರಶ್ನಿಸಿತ್ತು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದಂತೆ ಮಾರ್ಚ್ 30ರಂದು ಘಟಕವನ್ನು ಮುಚ್ಚಲಾಗಿದೆ.

ನ್ಯಾಯಾಲಯವು ಬಳಿಕ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.