ADVERTISEMENT

ಪರ್ಯಾಯ ಗುರುತು ಸಂಖ್ಯೆ ಗಡುವು ವಿಸ್ತರಣೆ

ಪಿಟಿಐ
Published 31 ಮೇ 2018, 19:30 IST
Last Updated 31 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಆಧಾರ್‌ ಸಂಖ್ಯೆಗೆ ಪರ್ಯಾಯವಾಗಿ ಬಳಸಬಹುದಾದ ಹೊಸ ‘ಪರ್ಯಾಯ ಗುರುತಿನ ಸಂಖ್ಯೆ’ (ವರ್ಚ್ಯುವಲ್ ಐಡಿ–ವಿಐಡಿ) ವ್ಯವಸ್ಥೆ ಜಾರಿಯ ಗಡುವನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಒಂದು ತಿಂಗಳು ವಿಸ್ತರಿಸಿದೆ.

ಈ ಮೊದಲು ಪ್ರಾಧಿಕಾರ ತಿಳಿಸಿದಂತೆ ಜೂನ್ 1ರಿಂದಲೇ ವಿಐಡಿ ವ್ಯವಸ್ಥೆ ಜಾರಿಯಾಗಬೇಕಿತ್ತು. ತಾಂತ್ರಿಕ ಕಾರಣಗಳಿಂದಾಗಿ ವ್ಯವಸ್ಥೆ ಜಾರಿಯ ಗಡುವನ್ನು ಜುಲೈ1ಕ್ಕೆ ಮುಂದೂಡಲಾಗಿದೆ. ಮುಂದಿನ ತಿಂಗಳಿನಿಂದ ವಿಐಡಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವಂತೆ ಪ್ರಾಧಿಕಾರವು‌ ಸೇವಾ
ದಾತ ಕಂಪನಿಗಳು, ಟೆಲಿಕಾಂ ಸಂಸ್ಥೆ, ಬ್ಯಾಂಕ್‌ಗಳಿಗೆ ಗುರುವಾರ ಸೂಚಿಸಿದೆ.

ಸೇವಾದಾತ ಕಂಪನಿಗಳು ಸದ್ಯ ವಿಐಡಿ ಸ್ವೀಕರಿಸುವುದು ಐಚ್ಛಿಕವಾಗಿದ್ದು ಮುಂದಿನ ತಿಂಗಳಿನಿಂದ ಕಡ್ಡಾಯವಾಗಲಿದೆ ಎಂದು ಪ್ರಾಧಿಕಾರದ ಸಿಇಓ ಅಜಯ್‌ ಭೂಷಣ್‌ ತಿಳಿಸಿದ್ದಾರೆ.

ADVERTISEMENT

ಜೂನ್‌ನಿಂದಲೇ ವಿಐಡಿ ಜಾರಿಗೆ ಪ್ರಾಧಿಕಾರ ಸಿದ್ಧವಾಗಿತ್ತು. ಆದರೆ, ಸೇವಾದಾತ ಕಂಪೆನಿಗಳು ಕಾಲಾವಕಾಶ ಕೋರಿವೆ. ಸಂಪರ್ಕ ಜಾಲ ಜೋಡಣೆಯಲ್ಲಿ ಕಾಣಿಸಿಕೊಂಡ ತಾಂತ್ರಿಕ ಅಡಚಣೆಯಿಂದಾಗಿ ಒಂದು ತಿಂಗಳು ಅವಧಿ ವಿಸ್ತರಿಸಲಾಗಿದೆ ಎಂದರು.

‘ವಿಐಡಿ’ ಎಂಬ ಹೊಸ ಕಲ್ಪನೆ

ಜನರ ವೈಯಕ್ತಿಕ ಮಾಹಿತಿ ಸುರಕ್ಷತೆ ದೃಷ್ಟಿಯಿಂದ ಪರ್ಯಾಯ ಗುರುತಿನ ಸಂಖ್ಯೆ ಪರಿಕಲ್ಪನೆಗೆ ಯುಐಡಿಎಐ ಇದೇ ಜನವರಿಯಲ್ಲಿ ಚಾಲನೆ ನೀಡಿತ್ತು.

12 ಅಂಕಿಗಳ ಆಧಾರ್ ಸಂಖ್ಯೆ ನೀಡಲು ಬಯಸದ ಜನರಿಗೆ 16 ಅಂಕಿಗಳ ಪರ್ಯಾಯ ಗುರುತಿನ ಸಂಖ್ಯೆ (ವಿಐಡಿ) ಒದಗಿಸುವ ವ್ಯವಸ್ಥೆ ಇದಾಗಿದೆ.

ಈ ಗುರುತಿನ ಸಂಖ್ಯೆಯನ್ನು ಮೊಬೈಲ್‌, ಬ್ಯಾಂಕ್‌ ಖಾತೆ ಸೇರಿದಂತೆ ವಿವಿಧೆಡೆ ಜೋಡಣೆ ಮಾಡಬಹುದು. ಗುರುತು, ಭಾವಚಿತ್ರ, ವಿಳಾಸ ದೃಢೀಕರಣಕ್ಕೂ ಇದನ್ನು ಬಳಸಬಹುದು. ಆಧಾರ್ ಸಂಖ್ಯೆಯನ್ನು ನೀಡುವ ಅವಶ್ಯಕತೆ ಇಲ್ಲ.

ಆಧಾರ್‌ ಸಂಖ್ಯೆ ಹೊಂದಿರುವವರು ಯುಐಡಿಎಐ ಜಾಲತಾಣದಿಂದ (https://uidai.gov.in) ಬೀಟಾ ಆವೃತ್ತಿಯಲ್ಲಿ 16 ಅಂಕಿಗಳ ಪರ್ಯಾಯ ಗುರುತಿನ ಸಂಖ್ಯೆ ಪಡೆದುಕೊಳ್ಳಬಹುದು. ಬೇಕಾದಷ್ಟು ಬಾರಿ ಈ ಗುರುತಿನ ಸಂಖ್ಯೆ ಪಡೆಯಲು ಅವಕಾಶ ಇದೆ. ಹೊಸ ಸಂಖ್ಯೆ ಪಡೆದ ತಕ್ಷಣ ಹಳೆಯ ಸಂಖ್ಯೆ ರದ್ದಾಗುತ್ತದೆ.

ಆಧಾರ್‌ ನೋಂದಣಿ: ನಿಯಮ ಸಡಿಲು

ಬ್ಯಾಂಕ್‌ ಶಾಖೆಗಳಲ್ಲಿ ತೆರೆಯಲಾಗಿರುವ ಆಧಾರ್‌ ಕೇಂದ್ರಗಳಿಗೆ ನಿಗದಿ ಪಡಿಸಲಾಗಿದ್ದ ದೈನಂದಿನ ಆಧಾರ್‌ ನೋಂದಣಿ, ಪರಿಷ್ಕರಣೆ ಕನಿಷ್ಠ ಮಿತಿಯನ್ನು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಸಡಿಲಿಸಿದೆ.

ಇಲ್ಲಿಯವರೆಗೆ ಬ್ಯಾಂಕ್‌ ಶಾಖೆಗಳ ಆಧಾರ್‌ ಕೇಂದ್ರಕ್ಕೆ ಪ್ರತಿದಿನ ಕನಿಷ್ಠ 16 ಆಧಾರ್‌ ನೋಂದಣಿ ಅಥವಾ ಪರಿಷ್ಕರಣೆ ಗುರಿ ನಿಗದಿ ಮಾಡಲಾಗಿತ್ತು. ಜುಲೈ 1ರಿಂದ ಗುರಿಯನ್ನು ಅರ್ಧದಷ್ಟು ಅಂದರೆ 8ಕ್ಕೆ ಇಳಿಸಲಾಗಿದೆ.

ಬರುವ ಅಕ್ಟೋಬರ್‌ನಿಂದ ಈ ಗುರಿಯನ್ನು ಪ್ರತಿದಿನ 12ಕ್ಕೆ ಮತ್ತು 2019ರ ಜನವರಿ 1ರಿಂದ ಪುನಃ 16ಕ್ಕೆ ಏರಿಸಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.

ಬ್ಯಾಂಕ್‌ ಆಧಾರ್ ಕೇಂದ್ರಗಳ ಗುರಿ ಸಾಧನೆ ಮತ್ತು ಕೆಲವು ತಾಂತ್ರಿಕ ತೊಂದರೆಗಳ ಕಾರಣದಿಂದಾಗಿ ನಿಗದಿತ ಮಿತಿಯನ್ನು ಪರಿಷ್ಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.