ADVERTISEMENT

ಪಳನಿ ಸರ್ಕಾರಕ್ಕೆ ಇಂದು ವಿಶ್ವಾಸಮತ ಪರೀಕ್ಷೆ

ಪಿಟಿಐ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ಪಳನಿ ಸರ್ಕಾರಕ್ಕೆ ಇಂದು ವಿಶ್ವಾಸಮತ ಪರೀಕ್ಷೆ
ಪಳನಿ ಸರ್ಕಾರಕ್ಕೆ ಇಂದು ವಿಶ್ವಾಸಮತ ಪರೀಕ್ಷೆ   

ಚೆನ್ನೈ : ತಮಿಳುನಾಡಿನ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿರುವ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ವಿಧಾನಸಭೆಯಲ್ಲಿ ಶನಿವಾರ ವಿಶ್ವಾಸಮತ ಕೋರಲಿದ್ದಾರೆ.

ಕೊನೆಯ ಕ್ಷಣದಲ್ಲಿ ಯಾವುದೇ ನಾಟಕೀಯ ಬೆಳವಣಿಗೆ ನಡೆಯದಿದ್ದರೆ ಪಳನಿಸ್ವಾಮಿ ಅವರು ವಿಶ್ವಾಸಮತ ಗೆಲ್ಲುವುದು ಖಚಿತ. ಆದರೆ, ವಿಶ್ವಾಸಮತದ ವಿರುದ್ಧ ಮತ ಹಾಕುವುದಾಗಿ ಈತನಕ ಶಶಿಕಲಾ ಬಣದಲ್ಲಿದ್ದ ಶಾಸಕ ಆರ್‌. ನಟರಾಜ್‌ ಹೇಳಿರುವುದು ಪಳನಿಸ್ವಾಮಿ ಅವರಲ್ಲಿ ಸ್ವಲ್ಪಮಟ್ಟಿನ ಆತಂಕ ಮೂಡಿಸಿದೆ.

234 ಸದಸ್ಯ ಬಲದ ವಿಧಾನಸಭೆಯಲ್ಲಿ 124 ಸದಸ್ಯರ ಬೆಂಬಲ ತಮಗೆ ಇದೆ ಎಂದು ಪಳನಿಸ್ವಾಮಿ ಹೇಳಿಕೊಂಡಿದ್ದಾರೆ. ಈಗ ಅದು 123ಕ್ಕೆ ಇಳಿದಿದೆ. ವಿಶ್ವಾಸಮತ ಪಡೆಯಲು 117 ಸದಸ್ಯರ ಬೆಂಬಲ ಬೇಕಾಗುತ್ತದೆ.

ADVERTISEMENT

ನಟರಾಜ್‌ ಅವರು ಪನ್ನೀರ್‌ಸೆಲ್ವಂ ಬಣಕ್ಕೆ ಸೇರಿದ್ದಾರೆ. ‘ಕ್ಷೇತ್ರದ ಜನರ ಜತೆ ಮಾತನಾಡಿದ್ದೇನೆ. ಪನ್ನೀರ್‌ಸೆಲ್ವಂ  ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬುದು ಜನರ ಅಭಿಪ್ರಾಯವಾಗಿದೆ. ಜನರ ಭಾವನೆಗಳನ್ನು ವಿಧಾನಸಭೆಯಲ್ಲಿ ಬಿಂಬಿಸುವುದು ನನ್ನ ಜವಾಬ್ದಾರಿ’ ಎಂದು ನಟರಾಜ್‌ ಹೇಳಿದ್ದಾರೆ.

ಈಗ ಪನ್ನೀರ್‌ಸೆಲ್ವಂ ಅವರಿಗೆ 11 ಶಾಸಕರ ಬೆಂಬಲ ಮಾತ್ರ ಇದೆ. ಆದರೆ ಇನ್ನಷ್ಟು ಶಾಸಕರನ್ನು ತಮ್ಮ ಕಡೆಗೆ ಸೆಳೆದುಕೊಂಡರೆ ಸರ್ಕಾರ ಅಲ್ಪಮತಕ್ಕೆ ಇಳಿಯಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಆಯೋಗದ ನೋಟಿಸ್
‘ಶಶಿಕಲಾ ಅವರನ್ನು ಎಐಎಡಿಎಂಕೆಯ ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದ ಕ್ರಮ ಸರಿಯಿಲ್ಲ’ ಎಂದು ಪನ್ನೀರ್‌ಸೆಲ್ವಂ ಬಣ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಚುನಾವಣಾ ಆಯೋಗ ಶಶಿಕಲಾ ಅವರಿಗೆ ಸೂಚಿಸಿದೆ.

ಶಶಿಕಲಾ ಉಚ್ಚಾಟನೆ
ಪಕ್ಷದ ತತ್ವ ಸಿದ್ಧಾಂತಗಳಿಗೆ  ವಿರುದ್ಧವಾಗಿ ನಡೆ ದುಕೊಂಡಿದ್ದಾರೆ ಎಂದು ಆಪಾದಿಸಿ ಒ. ಪನ್ನೀರ್‌ಸೆಲ್ವಂ ಬಣವು ಎಐಎಡಿಎಂಕೆ  ಪ್ರಧಾನ ಕಾರ್ಯದರ್ಶಿ ವಿ. ಕೆ. ಶಶಿಕಲಾ  ಮತ್ತು ಅವರ ಇಬ್ಬರು ಸಂಬಂಧಿಕರನ್ನು ಪಕ್ಷದಿಂದ ಉಚ್ಚಾಟಿಸುವ ಮೂಲಕ ಸೇಡು ತೀರಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.