ADVERTISEMENT

ಪಾಕ್‌ಗೆ ಶಸ್ತ್ರಾಸ್ತ್ರ ಪೂರೈಕೆ ಇಲ್ಲ: ಇಸ್ರೇಲ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2013, 19:59 IST
Last Updated 15 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ‘ಭಾರತದ ನೆರೆಯ ರಾಷ್ಟ್ರವಾದ ಪಾಕಿಸ್ತಾನಕ್ಕೆ ತಾನು ಯಾವುದೇ ರೀತಿಯ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿಲ್ಲ’ ಎಂದು ಇಸ್ರೇಲ್ ಭಾನುವಾರ ಸ್ಪಷ್ಟಪಡಿಸಿದೆ.

ಈ ಕುರಿತು ರಾಜಧಾನಿಯಲ್ಲಿ ಮಾತ ನಾಡಿದ ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ಅಲನ್ ಉಸ್ಫಿಜ್, ‘ಶಸ್ತ್ರಾಸ್ತ್ರ ರಫ್ತು ಸಂಬಂಧ ನಮ್ಮ ದೇಶ ಸ್ಪಷ್ಟ ಹಾಗೂ ಅತ್ಯಂತ ಕಟ್ಟುನಿಟ್ಟಿನ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿ ಸುತ್ತದೆ. ದೇಶದ ಈ ನೀತಿಯಲ್ಲಿ ಯಾವುದೇ ಬದಲಾವಣೆಯ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

‘ಜೆಟ್ ಯುದ್ಧ ವಿಮಾನಗಳಲ್ಲಿ ಬಳಸಲಾಗುವ ಅತ್ಯಾಧುನಿಕ ಯಂತ್ರ ಸೇರಿದಂತೆ ಹಲವು ಸೇನಾ ಸಾಮಗ್ರಿಗಳನ್ನು ಇಸ್ರೇಲ್  ಐದು ವರ್ಷದಿಂದ ಪಾಕಿಸ್ತಾನಕ್ಕೆ ಸರಬರಾಜು ಮಾಡುತ್ತಿದೆ’ ಎಂದು ಬ್ರಿಟನ್ ಸರ್ಕಾರ ವರದಿಯಲ್ಲಿ ಪ್ರಕಟಿಸಿತ್ತು.

ವರದಿಯನ್ನು ಬಲವಾಗಿ
ತಿರಸ್ಕರಿಸಿದ್ದ ಇಸ್ರೇಲ್, ‘ಭಾರತದ ಭದ್ರತೆಗೆ ಧಕ್ಕೆ ತರುವ ಯಾವುದೇ ಕೆಲಸವನ್ನು ನಮ್ಮ ದೇಶ ಮಾಡುವುದಿಲ್ಲ’ ಎಂದಿತ್ತು.
‘ಶಸ್ತ್ರಾಸ್ತ್ರ ರಫ್ತು ಅತ್ಯಂತ ಸಂಕೀರ್ಣ ಕ್ರಿಯೆಯಾಗಿದ್ದು, ಅನೇಕ ಕಂಪೆನಿಗಳು ಇದರಲ್ಲಿ ತೊಡಗಿವೆ. ಇಸ್ರೇಲ್‌ನಿಂದ ರಕ್ಷಣಾ ಸಾಮಗ್ರಿಗಳನ್ನು ಖರೀದಿಸುವ ಅತೀ ದೊಡ್ಡ ದೇಶವಾಗಿರುವ ಭಾರತ ಇಸ್ರೇಲ್‌ನ ಅತ್ಯಂತ ನಿಕಟ ಸ್ನೇಹಿತನಾಗಿದೆ. ಉಭಯ ದೇಶಗಳ ಮಧ್ಯೆ ರಕ್ಷಣಾ ಒಪ್ಪಂದಗಳು ಬಹಳ ಶೀಘ್ರಗತಿಯಲ್ಲಿ ಸಾಗುತ್ತಿವೆ’ ಎಂದು ಉಸ್ಫಿಜ್ ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.