ಮುಂಬೈ: ಐಸಿಸಿ ಅಂಪೈರ್ ಪಾಕಿಸ್ತಾನದ ಅಸದ್ ರವೂಫ್ ವಿರುದ್ಧ ಮುಂಬೈನ ರೂಪದರ್ಶಿಯೊಬ್ಬಳು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾಳೆ.
ರವೂಫ್ ವಿರುದ್ಧ ಲೀನಾ ಕಪೂರ್ ಎಂಬಾಕೆ ದೂರು ನೀಡಿರುವುದಾಗಿ ಇಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ. `ರವೂಫ್ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ~ ದೂರಿನಲ್ಲಿ ತಿಳಿಸಿದ್ದಾಳೆ.
ರವೂಫ್ ಮತ್ತು ಲೀನಾ ಮಾರ್ಚ್ ತಿಂಗಳಲ್ಲಿ ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಆ ಬಳಿಕ ಇಬ್ಬರ ನಡುವೆ ಗಾಢ ಸಂಬಂಧ ಬೆಳೆದಿತ್ತು. ಶ್ರೀಲಂಕಾದಲ್ಲಿ ಕೆಲ ದಿನಗಳ ಕಾಲ ಜೊತೆಯಾಗಿದ್ದರು. ಅನಂತರ ಮುಂಬೈನಲ್ಲೂ ಇಬ್ಬರು ಪರಸ್ಪರ ಭೇಟಿಯಾಗುತ್ತಿದ್ದರು.
ಇದೀಗ ರವೂಫ್ ನನ್ನಿಂದ ದೂರವಾಗಲು ಪ್ರಯತ್ನಿಸುತ್ತಿರುವುದಾಗಿ ಲೀನಾ ಆರೋಪಿಸಿದ್ದಾಳೆ. ಐದು ದಿನಗಳ ಹಿಂದೆ ಕರೆ ಮಾಡಿದ್ದ ರವೂಫ್ ಈ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವ ಆಸಕ್ತಿ ಇಲ್ಲ ಎಂದು ತಿಳಿಸಿರುವ ವಿಚಾರವೂ ದೂರಿನಲ್ಲಿದೆ. ~
ಅಲ್ಲಗಳೆದ ರವೂಫ್: ಆದರೆ ಈ ಆರೋಪವನ್ನು ರವೂಫ್ ಅಲ್ಲಗಳೆದಿದ್ದಾರೆ. `ಲೀನಾ ಕಪೂರ್ ಪ್ರಚಾರ ಪಡೆಯಲು ಇಂತಹ ಆರೋಪ ಮಾಡುತ್ತಿದ್ದಾಳೆ~ ಎಂದು ರವೂಫ್ ನುಡಿದಿದ್ದಾಗಿ `ದಿ ನ್ಯೂಸ್~ ವರದಿ ಮಾಡಿದೆ. ಈಗಾಗಲೇ ಮದುವೆಯಾಗಿರುವ ರವೂಫ್‌ಗೆ ಇಬ್ಬರು ಮಕ್ಕಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.