ADVERTISEMENT

ಪಾಕ್ ಆಕ್ರಮಿತ ಕಾಶ್ಮೀರ: ಚೀನಾ ಬೀಡು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಪಾಕ್ ಆಕ್ರಮಿತ ಕಾಶ್ಮೀರ ವಲಯದಲ್ಲಿ ಚೀನಾದ `ಪೀಪಲ್ಸ್ ಲಿಬರೇಷನ್ ಆರ್ಮಿ~ ಪಡೆಯ ಸೈನಿಕರೂ ಸೇರಿದಂತೆ ಸುಮಾರು ನಾಲ್ಕು ಸಾವಿರ ಚೀನಿ ಪ್ರಜೆಗಳು ಬೀಡುಬಿಟ್ಟಿದ್ದಾರೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಇದು ಭಾರತಕ್ಕೆ ಅತ್ಯಂತ ಕಳವಳಕಾರಿ ಸಂಗತಿ~ ಎಂದು ಬಣ್ಣಿಸಿದ್ದಾರೆ. ಈ ಜನರೆಲ್ಲಾ ಪಾಕ್ ಆಕ್ರಮಿತ ಕಾಶ್ಮೀರ ವಲಯದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳಲ್ಲಿ ಪಾಲ್ಗೊಂಡಿದ್ದಾರೆ. ಇವರಲ್ಲಿ ಬಹಳಷ್ಟು ಜನ ಎಂಜಿನಿಯರ್‌ಗಳೂ ಸೇರಿದ್ದಾರೆ. ಇನ್ನು ಕೆಲವರು ರಕ್ಷಣಾ ದೃಷ್ಟಿಯಿಂದಲೂ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಸ್ಮಾರಕದ ಅಂಗವಾಗಿ ನಡೆದ ಸಮಾರಂಭದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ ಮೆನನ್ ಅವರು ಈ ವಿಷಯ ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಂಗ್ ಈ ವಿವರಣೆ ನೀಡಿದ್ದಾರೆ.

ಈ ಕುರಿತಂತೆ ನವದೆಹಲಿಯು ಈಗಾಗಲೇ ಚೀನಾಕ್ಕೆ ತನ್ನ ಕಳವಳವನ್ನು ವ್ಯಕ್ತಪಡಿಸಿದೆ ಎನ್ನಲಾಗಿದೆ. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶದಲ್ಲಿ ಸುಮಾರು 11 ಸಾವಿರ ಚೀನಿ ಪಡೆಗಳು ಬೀಡುಬಿಟ್ಟಿದ್ದವು. ಆದರೆ `ಈ ಪ್ರದೇಶದಲ್ಲಿ ಚೀನಾ ಪಡೆಗಳು ಯಾವುದೇ ಅನಪೇಕ್ಷಿತ ಕೆಲಸದಲ್ಲಿ ತೊಡಗಿರಲಿಲ್ಲ~ ಎಂಬುದಾಗಿ ಚೀನಾ ಅಂದೇ ಸ್ಪಷ್ಟಪಡಿಸಿತ್ತು.

`ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬೃಹತ್ ಪ್ರಮಾಣದ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಚೀನಾ ಪಡೆಗಳು ಮತ್ತು ಚೀನಿ ಪ್ರಜೆಗಳು ಈ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ~ ಎಂದು ಭಾರತದ ಹಿರಿಯ ಸೇನಾ ಕಮಾಂಡರ್ ತಿಳಿಸಿದ್ದಾರೆ. 

`ಹೆದ್ದಾರಿಗಳು, ಅಣೆಕಟ್ಟುಗಳಂತಹ ಬೃಹತ್ ಪ್ರಮಾಣದ ಕಾಮಗಾರಿಗಳನ್ನು ಇಲ್ಲಿ ಭರದಿಂದ ನಡೆಸಲಾಗುತ್ತಿದೆ~ ಎಂದು ಅವರು ಹೇಳಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರ ವಲಯದ ಪ್ರದೇಶದಲ್ಲಿನ ಉತ್ತರದ ಭಾಗವು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಗಡಿ ನಿಯಂತ್ರಣ ರೇಖೆಗೆ ತೀರಾ ಸಮೀಪವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.