ADVERTISEMENT

ಪಾಕ್ ವಿಜ್ಞಾನಿ ಚಿಸ್ತಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 19:30 IST
Last Updated 9 ಏಪ್ರಿಲ್ 2012, 19:30 IST

 ನವದೆಹಲಿ (ಪಿಟಿಐ): ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷಗಳಿಂದ ರಾಜಸ್ತಾನದ ಅಜ್ಮೇರ್ ಜೈಲಿನಲ್ಲಿರುವ ಪಾಕಿಸ್ತಾನಿ ವಿಜ್ಞಾನಿ ಡಾ. ಮೊಹಮ್ಮದ್ ಖಲೀಲ್ ಚಿಸ್ತಿ ಅವರಿಗೆಸುಪ್ರೀಂ ಕೋರ್ಟ್ ಮಾನವೀಯತೆಯ ಆಧಾರದಲ್ಲಿ ಜಾಮೀನು ನೀಡಿದೆ.

80 ವರ್ಷದವರಾದ ಡಾ. ಚಿಸ್ತಿ ಕಾಯಿಲೆಯಿಂದ ಬಳಲುತ್ತಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಚಿಸ್ತಿ ಅವರ ವಯಸ್ಸು ಹಾಗೂ 1992ರಿಂದ ಅವರು ಭಾರತದ ಜೈಲಿನಲ್ಲೇ ಇರುವ ಅಂಶವನ್ನು ಪರಿಗಣಿಸಿ ನ್ಯಾಯಮೂರ್ತಿ ಪಿ. ಸದಾಸಿವಂ ಹಾಗೂ ಜೆ. ಚೆಲ್ಮೇಶ್ವರ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಜಾಮೀನು ನೀಡಿದೆ.

`ಜಾಮೀನು ನೀಡಲು ಈ ಪ್ರಕರಣ ಅರ್ಹವಾಗಿದೆ ಎಂದು ನಮಗೆ ಅನಿಸಿದೆ~ ಎಂಬುದಾಗಿ ತಿಳಿಸಿದ ನ್ಯಾಯಮೂರ್ತಿಗಳು, ಷರತ್ತಿನ ಮೇಲೆ ಚಿಸ್ತಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದರು. ಆದರೆ ಮುಂದಿನ ಆದೇಶದವರೆಗೆ ಅಜ್ಮೇರ್‌ನಿಂದ ಹೊರಹೋಗಬಾರದು ಎಂಬ ಸ್ಪಷ್ಟ ಸೂಚನೆಯನ್ನೂ ನ್ಯಾಯಪೀಠ ನೀಡಿತು.

`ಚಿಸ್ತಿ ದೆಹಲಿಯಲ್ಲಿ ವಾಸಿಸಲಾದರೂ ಅನುಮತಿ ನೀಡಬೇಕು~ ಎಂದು ಅವರ ಪರ ವಕೀಲ ಯು. ಲಲಿತ್ ಮಾಡಿಕೊಂಡ ಮನವಿಗೆ, ಅದಕ್ಕಾಗಿ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ನ್ಯಾಯಮೂರ್ತಿಗಳು ಸೂಚಿಸಿದರು. `ನೀವು ನಿಮ್ಮ ದೇಶಕ್ಕೆ ವಾಪಸು ತೆರಳಬೇಕು ಎಂಬುದನ್ನೆಲ್ಲ ಆ ಅರ್ಜಿಯಲ್ಲಿ ವಿವರಿಸಿ. ನಾವು ಪರಿಗಣಿಸುತ್ತೇವೆ~ ಎಂಬ ಭರವಸೆಯನ್ನೂ ನೀಡಿದರು.

ಚಿಸ್ತಿ ದೆಹಲಿಗೆ ತೆರಳುವುದನ್ನು ವಿರೋಧಿಸಿರುವ ರಾಜಸ್ತಾನ ಸರ್ಕಾರವು, ಅವರಿಗೆ ನೀಡಿದ `ವೀಸಾ ಅನ್ವಯ ಅಜ್ಮೇರ್ ಅಥವಾ ಸುತ್ತಲಿನ ಪ್ರದೇಶದಲ್ಲಿ ಮಾತ್ರ ವಾಸಿಸಬಹುದಾಗಿದೆ~ ಎಂದು ತಿಳಿಸಿದೆ.

ಪಾಕಿಸ್ತಾನ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ನಡುವೆ ಭಾನುವಾರ ನಡೆದ ಮಾತುಕತೆಯಲ್ಲಿ ಚಿಸ್ತಿ ವಿಚಾರವೂ ಪ್ರಸ್ತಾಪವಾಗಿತ್ತು. ಮರುದಿನವೇ ಅವರಿಗೆ ಜಾಮೀನು ದೊರಕಿರುವುದು ವಿಶೇಷ.

ಹಿನ್ನೆಲೆ: ಅಜ್ಮೇರ್‌ನ ಖ್ವಾಜಾ ಮೋಯಿದ್ದೀನ್ ಚಿಸ್ತಿ ದರ್ಗಾದ ಉಸ್ತುವಾರಿ ಹೊತ್ತಿರುವ ಪ್ರತಿಷ್ಠಿತ ಚಿಸ್ತಿ ಮನೆತನಕ್ಕೆ ಸೇರಿರುವ ಮೊಹಮ್ಮದ್ ಖಲೀಲ್ ಚಿಸ್ತಿ ದೇಶ ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಲ್ಲಿ ಓದುತ್ತಿದ್ದರು. ಆನಂತರ ಅಲ್ಲಿಯೇ ಉಳಿಯಲು ನಿರ್ಧರಿಸಿದರು.

ಸೂಕ್ಷ್ಮಜೀವಿಶಾಸ್ತ್ರಜ್ಞರಾಗಿದ್ದ ಅವರು 1992ರಲ್ಲಿ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ತಾಯಿಯನ್ನು ನೋಡಲು ಅಜ್ಮೇರ್‌ಗೆ ಬಂದಿದ್ದರು. ಆ ಸಂದರ್ಭದಲ್ಲಿ ನಡೆದ ಸಣ್ಣ ಗಲಾಟೆಯಲ್ಲಿ ಚಿಸ್ತಿ ನೆರೆಮನೆಯಾತ ಗುಂಡು ತಾಗಿ ಮೃತಪಟ್ಟಿದ್ದ ಮತ್ತು ಅವರ ಸೋದರ ಸಂಬಂಧಿಯೊಬ್ಬನಿಗೆ ಗಾಯವಾಗಿತ್ತು. ಈ ಪ್ರಕರಣದ ವಿಚಾರಣೆಯ ನಂತರ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಖಲೀಲ್ ಬಿಡುಗಡೆಗೆ ಪಾಕ್ ಸ್ವಾಗತ
ಇಸ್ಲಾಮಾಬಾದ್(ಐಎಎನ್‌ಎಸ್):
ಜೀವಾವಧಿ ಶಿಕ್ಷೆಗೆ ಗುರಿಯಾಗಿ ಅಜ್ಮೇರ್ ಜೈಲ್‌ನಲ್ಲಿದ್ದ ಪಾಕ್ ಪ್ರಜೆ ಖಲೀಲ್ ಚಿಸ್ತಿಗೆ ಭಾರತದ ಸುಪ್ರೀಂಕೋರ್ಟ್ ಜಾಮೀನು ನೀಡಿರುವುದನ್ನು ಪಾಕಿಸ್ತಾನ ಸ್ವಾಗತಿಸಿದೆ.

`ಇದೊಂದು ಸಕಾರಾತ್ಮಕ ಹೆಜ್ಜೆ~ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರ ಅಬ್ದುಲ್ ಬಾಸಿತ್ ಸೋಮವಾರ ಆನ್‌ಲೈನ್ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT