ADVERTISEMENT

ಪಾಕ್ ಹಿಂದೂಗಳಿಗೆ ಕಿರುಕುಳ: ಖಂಡನಾ ನಿರ್ಣಯಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ನವದೆಹಲಿ (ಪಿಟಿಐ):  ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ಕಿರುಕುಳ, ದೌರ್ಜನ್ಯ  ಪ್ರಕರಣಗಳ ಕುರಿತು ಸೋಮವಾರ ಬಿಜೆಪಿ, ಬಿಜೆಡಿ ಹಾಗೂ ಸಮಾಜವಾದಿ ಪಕ್ಷಗಳ ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿದ್ದು ಈ ಸಂಬಂಧ ಸಂಸತ್ತು ಖಂಡನಾ ನಿರ್ಣಯ ಅಂಗೀಕರಿಸಬೇಕು ಎಂದು ಆಗ್ರಹಿಸಿದರು.

ನಿರಂತರ ಕಿರುಕುಳದಿಂದಾಗಿ ಪಾಕ್‌ನ ಸಿಂಧ್ ಪ್ರಾಂತದ 150ಕ್ಕೂ ಹೆಚ್ಚು ಹಿಂದೂಗಳು ಭಾನುವಾರ ಭಾರತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಲೋಕಸಭೆ ಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸದಸ್ಯರು, ಸರ್ಕಾರ ಈ ಕೂಡಲೆ ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.

ಈ ವಿಚಾರದ ಕುರಿತು ಕೇಂದ್ರ ಸರ್ಕಾರ, ಪಾಕ್ ಸರ್ಕಾರದ ಜತೆ ಚರ್ಚಿಸಬೇಕು. ಆ ದೇಶದ ರಾಯಭಾರಿ ಯನ್ನು ಕರೆಯಿಸಿ ನಮ್ಮ ಖಂಡನೆಯನ್ನು ತಿಳಿಸಬೇಕು ಎಂದೂ ಸದಸ್ಯರು ಪಟ್ಟು ಹಿಡಿದರು. 

ಬಿಜೆಪಿ ನಾಯಕ ರಾಜನಾಥ ಸಿಂಗ್ ಮಾತನಾಡಿ, ಪಾಕ್‌ನ ಅಲ್ಪಸಂಖ್ಯಾತರು ಅದರಲ್ಲೂ ಹಿಂದೂಗಳು ಹಾಗೂ ಸಿಖ್ಖರು ಈಗ ಭಯದ ನೆರಳಲ್ಲಿ ಬದುಕುವಂತಾಗಿದ್ದು ಸುಮಾರು 20 ಹಿಂದೂ ಕುಟುಂಬಗಳು ಭಾರತದಲ್ಲಿ ನೆಲೆಸಲು ಇಲ್ಲಿಯ ಪೌರತ್ವದ ಬೇಡಿಕೆ ಇಟ್ಟಿದ್ದಾರೆ ಎಂದರು.

ಭಾರತದ ಯಾತ್ರಾಸ್ಥಳಗಳಿಗೆ ಆಗಮಿಸಿದ ಸುಮಾರು 250 ಹಿಂದೂಗಳಿಂದ ಅಲ್ಲಿಯ ಸರ್ಕಾರ ಮುಚ್ಚಳಿಕೆ ಪಡೆದಿದ್ದು, ಪಾಕ್ ವಿರುದ್ಧ ಒಂದು ಶಬ್ದವನ್ನೂ ಮಾತನಾಡದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ದೂರಿದರು.
ಹಿಂದೂ ಯುವಕ, ಯುವತಿ ಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾ ಗುತ್ತಿದ್ದು ತಮಗೆ ರಕ್ಷಣೆ ನೀಡಲು ಒತ್ತಾಯಿಸಿ ಅಲ್ಲಿಯ ಹಿಂದೂಗಳು ಭಾರತೀಯ ರಾಯಭಾರಿ ಕಚೇರಿಗೆ ಪತ್ರ ಬರೆದಿದ್ದಾರೆ ಎಂದರು.

ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಮಾತನಾಡಿ, `ಘಟನೆಗಳ ಕುರಿತು ಈ ಕೂಡಲೆ ಸರ್ಕಾರ ಪಾಕ್ ರಾಯಭಾರಿಯನ್ನು ಸದನಕ್ಕೆ ಕರೆಯಿಸಿ ಖಂಡನಾ ನಿರ್ಣಯ ತಿಳಿಸಬೇಕು. ಪಾಕ್‌ನ ವಿದ್ಯಮಾನಗಳ ಕುರಿತು ಭಾರತದಲ್ಲಿ ಯಾವುದೇ ಪ್ರತಿಕ್ರಿಯೆ ಬಾರದಿರುವುದು ಸೋಜಿಗ ತಂದಿದೆ~ ಎಂದು ಅವರು ಹೇಳಿದರು.

ಪಾಕ್‌ನ ಶಾಲಾ ಬಾಲಕಿ ಇಫ್ರಾ ಸಿದ್ದಿಕಿ ಹೇಳಿಕೆಯನ್ನು ಪ್ರಸ್ತಾಪಿಸಿ ಮಾತನಾಡಿದ ಬಿಜು ಜನತಾ ದಳದ ಬಿ. ಮೆಹತಾಬ್ ಅವರು, `ಧಾರ್ಮಿಕ ಅಲ್ಪ ಸಂಖ್ಯಾತರ ಅಪಹರಣ, ಬಲವಂತದ ಮತಾಂತರ, ಅಪ್ರಾಪ್ತ ಬಾಲಕಿಯರ ಮದುವೆಯಂತಹ ಅಹಿತಕರವಾದ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಅಲ್ಲಿಯ ಆಡಳಿತ ಮೂಕ ಪ್ರೇಕ್ಷಕನಂತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.