ADVERTISEMENT

ಪಿಎನ್‌ಬಿ ವಂಚನೆ ಪ್ರಕರಣ: ಬ್ಯಾಂಕ್‌ನ ನಿವೃತ್ತ ಅಧಿಕಾರಿ ಮಾರ್ಚ್ 14 ವರೆಗೆ ಸಿಬಿಐ ವಶಕ್ಕೆ

ಏಜೆನ್ಸೀಸ್
Published 2 ಮಾರ್ಚ್ 2018, 9:50 IST
Last Updated 2 ಮಾರ್ಚ್ 2018, 9:50 IST
ನೀರವ್‌ ಮೋದಿ
ನೀರವ್‌ ಮೋದಿ   

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚನೆ ಮಾಡಿದ ಪ್ರಕರಣ ಸಂಬಂಧ ಈ ಬ್ಯಾಂಕಿನ ನಿವೃತ್ತ ಆಂತರಿಕ ಮುಖ್ಯ ಆಡಿಟರ್‌ ಭಿಷ್ನುಬ್ರೂತ್‌ ಮಿಶ್ರಾ ಅವರನ್ನು ಶುಕ್ರವಾರ ಮುಂಬೈ ನ್ಯಾಯಾಲಯ ಮಾರ್ಚ್ 14ರ ವರೆಗೆ ಸಿಬಿಐ ವಶಕ್ಕೆ ನೀಡಿದೆ.

ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಸಿಬಿಐ ಪೊಲೀಸರು ಮಿಶ್ರಾ ಅವರನ್ನು ಗುರುವಾರ ಬಂಧಿಸಿದ್ದರು.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಬ್ರಾಡಿ ಶಾಖೆಯ ಕಚೇರಿಯಲ್ಲಿ 2011ರಿಂದ 2015ರ ವರೆಗಿನ ಆಂತರಿಕ ಆಡಿಟ್‌ಗೆ ಸಂಬಂಧಿಸಿದಂತೆ ಮಿಶ್ರಾ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ತಿಳಿಸಿತ್ತು. 

ADVERTISEMENT

ಈ ಶಾಖೆಯಲ್ಲಿ ಆಡಿಟಿಂಗ್‌ ಮತ್ತು ಪರಿಶೀಲನೆಯಲ್ಲಿ ಅನುಸರಿಸಲಾದ ಕಾರ್ಯವಿಧಾನಗಳಿಗೆ ಮಿಶ್ರಾ ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ.

ಪ್ರಕರಣ ಸಂಬಂಧ ಸಿಬಿಐ 13 ಜನರನ್ನು ಪ್ರಶ್ನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಿಂದ ಮಾಹಿತಿ ಸಂಗ್ರಹಿಸಿದಾಗ ಇತರ ವ್ಯಕ್ತಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಹೆಚ್ಚಿನ ಶೋಧ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಹಾಗೂ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಎಲ್ಲಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ನೀರವ್‌ ಮೊದಿ ಅಮೆರಿಕದಲ್ಲೇ ಇದ್ದಾನೆ ಎಂಬ ವರದಿಗಳನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನೀರವ್ ಮೋದಿ ವಿರುದ್ಧ ಇ.ಡಿ (ಜಾರಿ ನಿರ್ದೇಶನಾಲಯ) ಮತ್ತು ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆತನನ್ನು ವಶಕ್ಕೆ ಪಡೆಯಲು ಇಂಟರ್ ಪೋಲ್ ನೆರವು ಕೂಡ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.