ADVERTISEMENT

ಪಿಒಕೆ ಪಾಕ್‌ಗೆ ಸೇರಿದ್ದು: ಫಾರೂಕ್‌ ಅಬ್ದುಲ್ಲಾ

ಪಿಟಿಐ
Published 11 ನವೆಂಬರ್ 2017, 20:01 IST
Last Updated 11 ನವೆಂಬರ್ 2017, 20:01 IST
ಫಾರೂಖ್‌ ಅಬ್ದುಲ್ಲಾ
ಫಾರೂಖ್‌ ಅಬ್ದುಲ್ಲಾ   

ಶ್ರೀನಗರ: ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ಪಾಕಿಸ್ತಾನಕ್ಕೆ ಸೇರಿದ್ದು ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಹಾಗೂ ಸಂಸದ ಫಾರೂಕ್ ಅಬ್ದುಲ್ಲಾ  ಹೇಳಿದ್ದಾರೆ.

‘ಭಾರತ ಮತ್ತು ಪಾಕಿಸ್ತಾನದ ನಡುವೆ ಎಷ್ಟೇ ಯುದ್ಧಗಳಾಗಲಿ ಇದನ್ನು ಬದಲಿಸಲು ಸಾಧ್ಯವಿಲ್ಲ’ ಎಂದು ಅವರು ಖಂಡತುಂಡವಾಗಿ ಹೇಳಿದ್ದಾರೆ.

ಸ್ವತಂತ್ರ ಕಾಶ್ಮೀರ ಕಲ್ಪನೆಯನ್ನು ಪಾಕಿಸ್ತಾನದ ಪ್ರಧಾನಿ ಶಾಹಿದ್‌ ಖಕಾನ್‌ ಅಬ್ಬಾಸಿ ನಿರಾಕರಿಸಿದ ಬೆನ್ನಲ್ಲೇ ಅಬ್ದುಲ್ಲಾ ಅವರ ಈ ಹೇಳಿಕೆ ಹೊರಬಿದ್ದಿದೆ.

ADVERTISEMENT

‘ಚೀನಾ, ಪಾಕಿಸ್ತಾನ ಮತ್ತು ಭಾರತದಂತಹ ಅಣ್ವಸ್ತ್ರ ಹೊಂದಿದ ರಾಷ್ಟ್ರಗಳ ನಡುವಿರುವ ನಾವು ಸ್ವತಂತ್ರ ಕಾಶ್ಮೀರದ ಬಗ್ಗೆ ಕನಸು ಕಾಣುವುದು, ಮಾತನಾಡುವುದು ಸರಿಯಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನಮ್ಮನ್ನು ಸುತ್ತುವರಿದಿರುವ ಮೂರು ರಾಷ್ಟ್ರಗಳಲ್ಲಿ ಪರಮಾಣು ಬಾಂಬ್‌ಗಳಿವೆ. ಅಲ್ಲಾನ ಸ್ಮರಣೆಯೊಂದನ್ನು ಹೊರತುಪಡಿಸಿ ನಮ್ಮಲ್ಲಿ ಏನಿದೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿಭಜನೆ ಸಂದರ್ಭದಲ್ಲಿ ಭಾರತವನ್ನು ಸೇರುವ ಮೂಲಕ ನಾವು ದೊಡ್ಡ ತಪ್ಪು ಮಾಡಿದೆವು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

‘ ನಾವು ಪ್ರೀತಿಯಿಂದ ಭಾರತವನ್ನು ಅಪ್ಪಿದೆವು. ಆದರೆ, ಭಾರತ  ನಮಗೆ ಬೆನ್ನಲ್ಲಿ ಚೂರಿ ಹಾಕಿದೆ. ಅಂದು ನಾವು ತೆಗೆದುಕೊಂಡ ತಪ್ಪು ನಿರ್ಧಾರದಿಂದ ಇಂದು ಕಾಶ್ಮೀರ ಈ ಸ್ಥಿತಿಗೆ ತಲುಪಿದೆ’  ಎಂದು ಅಬ್ದುಲ್ಲಾ ಅಸಮಾಧಾನ ಹೊರಹಾಕಿದ್ದಾರೆ.

‘ಆಂತರಿಕ ಸ್ವಾಯತತ್ತೆ ನಮ್ಮ ಹಕ್ಕು.ಕೇಂದ್ರ ಸರ್ಕಾರ ಅದನ್ನು ದೃಢಪಡಿಸಿದ ಹೊರತು ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.