ನವದೆಹಲಿ: ಕೇಂದ್ರ ಜಾಗೃತ ಆಯುಕ್ತ ಪಿ. ಜೆ. ಥಾಮಸ್ ನೇಮಕಾತಿ ರದ್ದು ಮಾಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸುವುದಾಗಿ ಪ್ರಧಾನಿ ಪ್ರಧಾನಿ ಮನಮೋಹನ್‌ಸಿಂಗ್ ಗುರುವಾರ ಹೇಳಿದ್ದಾರೆ. ಈ ಸಂಬಂಧ ಸಂಸತ್ತಿನಲ್ಲಿ ಸೋಮವಾರ ಹೇಳಿಕೆ ನೀಡಲಿದ್ದಾರೆ.
‘ನಾನು ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸುತ್ತೇನೆ. ಈ ಸಂಬಂಧ ಸಂಸತ್ತಿನಲ್ಲಿ ಹೇಳಿಕೆ ನೀಡುತ್ತೇನೆ’ ಎಂದು ಮನಮೋಹನ್‌ಸಿಂಗ್ ಸಂಸತ್ತಿನ ಹೊರಗೆ ಪತ್ರಕರ್ತರಿಗೆ ತಿಳಿಸಿದರು. ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದಿವೆ.
ಪ್ರಧಾನಿ, ಗೃಹ ಸಚಿವರು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಉನ್ನತಾಧಿಕಾರ ಸಮಿತಿ ಕಾನೂನು ರೀತಿ ಸಿವಿಸಿ ಅವರನ್ನು ನೇಮಕ ಮಾಡಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸರ್ಕಾರಕ್ಕೆ ಮುಜುಗರ: ಕೇಂದ್ರ ಜಾಗೃತ ದಳದ ಕಮಿಷನರ್ ಪಿ.ಜೆ. ಥಾಮಸ್ ನೇಮಕಾತಿ ರದ್ದು ಮಾಡಿದ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಯುಪಿಎ ಸರ್ಕಾರದ ಮೇಲೆ ಮುಗಿಬಿದ್ದಿರುವುದರಿಂದ ಪ್ರಧಾನಿ ಮನಮೋಹನ್‌ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮುಜುಗರಕ್ಕೆ ಒಳಗಾಗಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗುತ್ತಿದ್ದಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಸುಪ್ರೀಂ ಕೋರ್ಟ್ ತೀರ್ಪು ಬಿಜೆಪಿ ನಿಲುವನ್ನು ಎತ್ತಿ ಹಿಡಿದಿದೆ ಎಂದಿದ್ದಾರೆ.
ಥಾಮಸ್ ನೇಮಕ ಸಂದರ್ಭದಲ್ಲಿ ಭಿನ್ನಮತ ದಾಖಲು ಮಾಡಿದ್ದ ‘ಸಿವಿಸಿ ನೇಮಕಾತಿ ಉನ್ನತಾಧಿಕಾರ ಸಮಿತಿ ಸದಸ್ಯರೂ ಆಗಿರುವ ಸುಷ್ಮಾ ಸ್ವರಾಜ್, ಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆ ‘ಟ್ವೀಟರ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಸಿವಿಸಿ ಸ್ಥಾನದ ಘನತೆ ಮರು ಸ್ಥಾಪಿಸಬೇಕಾಗಿದೆ’ ಎಂದಿದ್ದಾರೆ.
ಸರ್ಕಾರದ ಹೇಳಿಕೆಗೆ ಆಗ್ರಹ: ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸರ್ಕಾರ ಹೇಳಿಕೆ ನೀಡಬೇಕೆಂದು ಸಂಸತ್ತಿನ ಉಭಯ ಸದನಗಳಲ್ಲಿ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಆಗ್ರಹಿಸಿದೆ.
‘ಥಾಮಸ್ ನೇಮಕಾತಿಗೆ ಕುರಿತಂತೆ ಲೋಪ ಆಗಿರುವುದೆಲ್ಲಿ’ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲಿ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಗೋಪಿನಾಥ್ ಮುಂಡೆ ಒತ್ತಾಯಿಸಿದ್ದಾರೆ.
ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಲಾಪಕ್ಕೆ ಅಡ್ಡಿಪಡಿಸಿದರು. ‘ಭ್ರಷ್ಟಾಚಾರ ಹತ್ತಿಕ್ಕಲಾಗದ ಸರ್ಕಾರ ಅದಕ್ಷ’ ಎಂದು ಘೋಷಣೆಗಳನ್ನು ಕೂಗುತ್ತಾ ಸಭಾಪತಿ ಪೀಠದ ಮುಂದೆ ಗುಂಪುಗೂಡಿದರು. ಅನಂತರ ಜೇಟ್ಲಿ ಮಾತನಾಡಿದರು.
ಹೊಣೆಗಾರಿಕೆ ಹೊರಲಿ: ಸಿವಿಸಿ ನೇಮಕಾತಿ ಹೊಣೆಯನ್ನು ಪ್ರಧಾನಿ ಮನಮೋಹನ್‌ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಹೊರಬೇಕು ಎಂದು ಬಿಜೆಪಿ ಸಂಸದೀಯ ಪಕ್ಷದ ಅಧ್ಯಕ್ಷ ಎಲ್.ಕೆ. ಅಡ್ವಾಣಿ ಹೇಳಿದರು.
ದೇಶದ 60 ವರ್ಷಗಳ ಇತಿಹಾಸದಲ್ಲಿ ಹಿಂದೆಂದೂ ಈ ರೀತಿ ನಡೆದಿಲ್ಲ. ಸಿವಿಸಿ ನೇಮಕಾತಿ ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಹೊಣೆಯನ್ನು ಈ ಇಬ್ಬರು ಮುಖಂಡರು ಹೊರಬೇಕು ಎಂದು ಅಡ್ವಾಣಿ ತಿಳಿಸಿದರು.
ಥಾಮಸ್ ನೇಮಕಾತಿ ರದ್ದು ಮಾಡುವ ಮೂಲಕ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ‘ಕಪಾಳ ಮೋಕ್ಷ’ ಮಾಡಿದೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ವ್ಯಾಖ್ಯಾನಿಸಿದ್ದಾರೆ.
ಥಾಮಸ್ ನೇಮಕದಿಂದ ಆಗಿರುವ ಲೋಪವನ್ನು ಈಗ ಸರಿಪಡಿಸಲು ಸಾಧ್ಯವಿಲ್ಲ. ಯುಪಿಎ ಸರ್ಕಾರವನ್ನು ಮುಜುಗರಕ್ಕೆ ಸಿಕ್ಕಿಸಿರುವ ಈ ಬೆಳವಣಿಗೆಗೆ ಸಂಬಂಧಿಸಿದಂತೆ ಪ್ರಧಾನಿ ರಾಜೀನಾಮೆಗೆ ಒತ್ತಡ ಹೇರುವುದಿಲ್ಲ ಎಂದು ಪತ್ರಕರ್ತರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.