ಕೋಲ್ಕತ್ತ (ಪಿಟಿಐ): ಪ್ರೆಸ್ ಟ್ರಸ್ಟ್ ಆಫ್ ಇಂಡಿಯ ಸುದ್ದಿ ಸಂಸ್ಥೆಯ ಮಾಜಿ ಅಧ್ಯಕ್ಷ ಪಿ.ಕೆ.ರಾಯ್ (91) ಅವರು ಶನಿವಾರ ಇಲ್ಲಿ ನಿಧನರಾದರು.ಪ್ರತಾಪ್ ಕುಮಾರ್ ರಾಯ್ ಅವರು ಆಲ್ ಇಂಡಿಯಾ ನ್ಯೂಸ್‌ಪೇಪರ್ ಸೊಸೈಟಿ ಮತ್ತು ಆಡಿಟ್ ಬ್ಯೂರೊ ಆಫ್ ಸರ್ಕ್ಯುಲೇಷನ್‌ಗಳ ಅಧ್ಯಕ್ಷರಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಇವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದ ನಂತರ, ಇಂಗ್ಲೆಂಡ್‌ನಲ್ಲಿ ಮುದ್ರಣ ತಂತ್ರಜ್ಞಾನವನ್ನೂ ಅಧ್ಯಯನ ಮಾಡಿದ್ದರು.
1953ರಲ್ಲಿ `ಟೈಮ್ಸ ಆಫ್ ಇಂಡಿಯ~ ಪತ್ರಿಕೆಯಲ್ಲಿ ಉದ್ಯೋಗಕ್ಕೆ ಸೇರಿದರು. ನಂತರದ ದಿನಗಳಲ್ಲಿ ಅದೇ ಪತ್ರಿಕೆಯ 12 ಆವೃತ್ತಿಗಳನ್ನು ಆರಂಭಿಸಿದರು. 40ರ ಹರೆಯದಲ್ಲೇ ಅದೇ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದರು.
1970ರಲ್ಲಿ ರಾಯ್ `ಸಕಾಳ್~ ಪತ್ರಿಕೆಯ ಮುಂಬೈ ಆವೃತ್ತಿ ಆರಂಭಿಸಿದರು. 1974ರಲ್ಲಿ ಕೋಲ್ಕತ್ತಾಕ್ಕೆ ವಾಪಾಸಾದರು. ಅಲ್ಲಿ ಅಮೃತ ಬಜಾರ್ ಪತ್ರಿಕಾ ಮತ್ತು ಜುಗಾಂತರ್ ಸಮೂಹವನ್ನು ಸೇರಿಕೊಂಡರು. 1980ರಲ್ಲಿ ಬಂಗಾಳಿ ಭಾಷೆಯ ದಿನಪತ್ರಿಕೆ `ಆಜ್‌ಕಲ್~ ಆರಂಭಿಸಿದರು. 2004ರಲ್ಲಿ ಇದೇ ಪತ್ರಿಕೆಯಲ್ಲಿ ಪ್ರಧಾನ ಸಂಪಾದಕರಾಗಿ ನಿವೃತ್ತರಾದರು.
ಪ್ರಕಟಿತ ಕೃತಿಗಳು: ರಾಯ್ ಅವರು `ಶುಖದ್ಯಾ ಶುಬೋಚಾನ್~ ಸೇರಿದಂತೆ ಬಂಗಾಳಿ ಭಾಷೆಯಲ್ಲಿ ಕೆಲವು ಪುಸ್ತಕಗಳನ್ನು ರಚಿಸಿದ್ದೇ ಅಲ್ಲದೆ, ಆಹಾರ ಮತ್ತು ಪ್ರವಾಸ ಕುರಿತು ಹಲವು ಪತ್ರಿಕೆಗಳಿಗೆ, ನಿಯತಕಾಲಿಕೆಗಳಿಗೆ ವೈವಿಧ್ಯಮಯ ಲೇಖನಗಳನ್ನೂ ಬರೆದಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.