ADVERTISEMENT

ಪುನಃ ಕಾಡಲಿದೆಯಂತೆ ಅಂಧಕಾರದ ಭೂತ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 6:10 IST
Last Updated 2 ಆಗಸ್ಟ್ 2012, 6:10 IST

ಲಕ್ನೊ (ಐಎಎನ್‌ಎಸ್): ಮೂರು ವಿದ್ಯುತ್ ಸರಬರಾಜು ಜಾಲಗಳ (ಪವರ್ ಗ್ರಿಡ್) ವೈಫಲ್ಯದಿಂದ ಮಂಗಳವಾರ ದೇಶದ ಅರ್ಧಕ್ಕೂ ಹೆಚ್ಚು ಪ್ರದೇಶದ ಜನರು ತೀವ್ರ ಸ್ವರೂಪದ ತೊಂದರೆ ಅನುಭವಿಸಿ ಸಾಕಪ್ಪಾ, ಸಾಕು ಈ ಸಂಕಟ ಎಂದು ನಿಟ್ಟುಸಿರು ಬಿಡುವ ಮುನ್ನವೇ, ಸಧ್ಯದಲ್ಲಿಯೇ ಈ ಸ್ಥಿತಿ ಮತ್ತೊಮ್ಮೆ ಪುನರಾವರ್ತನೆಯಾಗುವ ಸಂಭವವಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಗ್ವಾಲಿಯರ್ ಹಾಗೂ ಆಗ್ರಾ ಮಧ್ಯದಲ್ಲಿರುವ 400ಕಿ.ವ್ಯಾ ಸಾಮರ್ಥ್ಯದ ಜೋಡಿ ಮಾರ್ಗದಲ್ಲಿ ಉಂಟಾಗಿರುವ ಅತಿಯಾದ ಒತ್ತಡದ ಕಾರಣದಿಂದ ಬುಧವಾರ ಸಂಜೆ ಜಾಲವೊಂದು (ಗ್ರಿಡ್) ವೈಫಲ್ಯಗೊಳ್ಳುವ ಹಂತದಲ್ಲಿತ್ತು. ಆದರೆ ಕೆಲ ಪರಿಣಿತ ಸಿಬ್ಬಂದಿಯ ಸಕಾಲಿಕ ಕಾರ್ಯನಿರ್ವಹಣೆಯಿಂದಾಗಿ ಅದನ್ನು ತಪ್ಪಿಸಲಾಯಿತು ಎಂದು ಉತ್ತರ ಪ್ರದೇಶ ವಿದ್ಯುತ್ ಕಾರ್ಪೊರೇಷನ್ ಲಿಮಿಟೆಡ್‌ನ (ಯುಪಿಪಿಸಿಎಲ್) ನೂತನ ನಿರ್ದೇಶಕ ಎ.ಪಿ.ಮಿಶ್ರಾ ತಿಳಿಸಿದ್ದಾರೆ.

ಪ್ರಮುಖವಾಗಿರುವ ಈ ಮಾರ್ಗದಲ್ಲಿ ವಿದ್ಯುತ್ ಪ್ರವಾಹವು 800ಮೆ.ವ್ಯಾಟ್‌ಗೆ ತಲುಪಿ ಒತ್ತಡ ಹೆಚ್ಚಾಗಿದ್ದು, ಅದನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸಿಬ್ಬಂದಿ ಈ ಮಾರ್ಗಕ್ಕೆ ಸಂಪರ್ಕವಿರುವ ಅನೇಕ ಮಾರ್ಗಗಳ ಸಂಪರ್ಕ ಸ್ಥಗಿತಗೊಳಿಸಿ ಅದನ್ನು 600ಮೆ.ವ್ಯಾಟ್‌ಗೆ ತಗ್ಗಿಸಲಾಗಿದೆ ಎಂದು ಯುಪಿಪಿಸಿಎಲ್ ಮೂಲಗಳು ಹೇಳಿವೆ.

ಯಾವುದೇ ಕ್ಷಣದಲ್ಲಿ ಈ ಮಾರ್ಗದಲ್ಲಿರುವ ಗ್ರಿಡ್ ವೈಫಲ್ಯವಾಗುವ ಸಂಭವವಿರುವುದರಿಂದ ಇದನ್ನು ತಪ್ಪಿಸಲು ಅಧಿಕಾರಿಗಳಿಗೆ ಹಾಗೂ ಎಂಜನಿಯರ್‌ಗಳಿಗೆ ಜಾಗರೂಕತೆಯಿಂದ ಕಾರ್ಯನಿರ್ವಹಿಸುವಂತೆ ತಿಳಿಸಲಾಗಿದೆ ಎಂದು ಮಿಶ್ರಾ ಹೇಳಿದರು.

ಮಂಗಳವಾರ ಉಂಟಾದ ಮೂರು ಪ್ರಮುಖ ವಿದ್ಯುತ್ ಸರಬರಾಜು ಜಾಲಗಳ (ಪವರ್ ಗ್ರಿಡ್) ವೈಫಲ್ಯದಿಂದಾಗಿ 22 ರಾಜ್ಯಗಳ ಜನರು ತೀವ್ರ ಸಂಕಷ್ಟ ಎದುರಿಸಿದರು. ವಿದ್ಯುತ್ ವ್ಯತ್ಯಯದಿಂದ ರೈಲ್ವೆ, ಮೆಟ್ರೊ ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿತ್ತು. ಒಟ್ಟಾರೆ 60 ಕೋಟಿಯಷ್ಟು ಜನರು ಪರದಾಡುವಂತಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.