ಕೊಚ್ಚಿ (ಪಿಟಿಐ): ನೈತಿಕ ಪೊಲೀಸ್ಗಿರಿ ವಿರುದ್ಧ ‘ಪ್ರೀತಿಯ ಚುಂಬನ’ ಕಾರ್ಯಕ್ರಮಕ್ಕೆ ಮರೀನ್ ಡ್ರೈವ್ ಮೈದಾನದತ್ತ ಮೆರವಣಿಗೆ ನಡೆಸಲು ಸಿದ್ಧರಾಗಿದ್ದ ಸಂಘಟನಾಕಾರರನ್ನು ಮತ್ತು ಅವರಿಗೆ ಬೆಂಬಲ ವ್ಯಕ್ತಪಡಿಸಿದ 50 ಜನರನ್ನು ಭಾನುವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
‘ಫ್ರೀ ಥಿಂಕರ್ಸ್’ ಹೆಸರಿನ ಸಂಘಟನೆ ಕಾರ್ಯಕ್ರಮ ಆಯೋಜಿಸಿತ್ತು. ಸಂಘಟಕರು ಎರ್ನಾಕುಲಂ ಕಾನೂನು ಕಾಲೇಜಿನಿಂದ ಮರೀನ್ ಡ್ರೈವ್ ಮೈದಾನದವರೆಗೆ ಮೆರವಣಿಗೆ ನಡೆಸಲು ಯತ್ನಿಸಿದಾಗ ಅವರನ್ನು ತಡೆಯಲಾಯಿತು ಎಂದು ಅವರು ತಿಳಿಸಿದ್ದಾರೆ. ನೈತಿಕ ಪೊಲೀಸ್ಗಿರಿ ವಿರುದ್ಧ ಪ್ರತಿಭಟನಾಕಾರರು ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನೂ ಕೂಗಿದರು.
ಈ ಕಾರ್ಯಕ್ರಮಕ್ಕೆ ಸಾವಿರ ಮಂದಿ ಪಾಲ್ಗೊಳ್ಳುವರು ಎಂದು ಸಂಘಟಕರು ನಿರೀಕ್ಷೆ ಮಾಡಿದ್ದರು. ಆದರೆ, ಕಾರ್ಯಕ್ರಮದ ಕುರಿತು ಮಾಧ್ಯಮಗಳು ಹೆಚ್ಚಿನ ಪ್ರಚಾರ ಮಾಡಿದ್ದರಿಂದ ಕುತೂಹಲಗೊಂಡ ಜನರು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಜಮಾಯಿಸಿದ್ದರು.
ಈ ಕಾರ್ಯಕ್ರಮ ವಿರೋಧಿಸಿ ಕೇರಳ ಶಿವಸೇನಾ ಜಿಲ್ಲಾ ಘಟಕ ಮತ್ತು ವಿದ್ಯಾರ್ಥಿ ಒಕ್ಕೂಟ ಹಾಗೂ ಮುಸ್ಲಿಂ ಸಂಘಟನೆಯೊಂದು ಪ್ರತಿಭಟನಾ ಮೆರವಣಿಗೆ ನಡೆಸಿದವು. ‘ಪ್ರೀತಿಯ ಚುಂಬನ ಕಾರ್ಯಕ್ರಮವು ಕೇರಳ ಸಂಸ್ಕೃತಿಗೆ ವಿರೋಧವಾಗಿದೆ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ’ ಎಂದು ಕಾರ್ಯಕ್ರಮ ವಿರೋಧಿಸಲು ಆಗಮಿಸಿದ ವ್ಯಕ್ತಿಯೊಬ್ಬರು ಹೇಳಿದರೆ, ಇದೇ ಸ್ಥಳದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಸಂಘಟಕರಿಗೆ ಬೆಂಬಲ ಸೂಚಿಸಿದ. ಸ್ಥಳದಲ್ಲಿ ಸೇರಿದ್ದ ಸಾವಿರಾರು ಜನರನ್ನು ಪೊಲೀಸರು ಚದುರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.