ADVERTISEMENT

ಪೊಲೀಸ್‌ ಅಧಿಕಾರಿ ಶ್ರೇಷ್ಠಾ ಠಾಕೂರ್ ಎತ್ತಂಗಡಿ

ನಿಯಮ ಉಲ್ಲಂಘಿಸಿದ ಬಿಜೆಪಿ ಮುಖಂಡನಿಗೆ ದಂಡ l ಮಾಮೂಲಿ ವರ್ಗಾವಣೆ ಎಂದ ಸರ್ಕಾರ

ಪಿಟಿಐ
Published 2 ಜುಲೈ 2017, 17:49 IST
Last Updated 2 ಜುಲೈ 2017, 17:49 IST
ಪೊಲೀಸ್‌ ಅಧಿಕಾರಿ ಶ್ರೇಷ್ಠಾ ಠಾಕೂರ್ ಎತ್ತಂಗಡಿ
ಪೊಲೀಸ್‌ ಅಧಿಕಾರಿ ಶ್ರೇಷ್ಠಾ ಠಾಕೂರ್ ಎತ್ತಂಗಡಿ   

ಬುಲಂದ್‍ಶಹರ್‍: ಲಖನೌ (ಪಿಟಿಐ): ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಬಿಜೆಪಿ ನಾಯಕರೊಬ್ಬರು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಿದ ಮಹಿಳಾ ಪೊಲೀಸ್ ಅಧಿಕಾರಿ ಶ್ರೇಷ್ಠಾ ಠಾಕೂರ್ ಅವರನ್ನು ಶನಿವಾರ ಎತ್ತಂಗಡಿ ಮಾಡಲಾಗಿದೆ.

ಸಂಚಾರ ನಿಯಮ ಉಲ್ಲಂಘಿಸಿದ್ದು ಮಾತ್ರವಲ್ಲದೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಕ್ಕಾಗಿ ಅಲ್ಲಿನ ಸ್ಥಳೀಯ ಬಿಜೆಪಿ ಮುಖಂಡ ಮತ್ತು  ಐವರು ಕಾರ್ಯಕರ್ತರನ್ನು ಶ್ರೇಷ್ಠಾ  ಕಳೆದ ವಾರ ಜೈಲಿಗಟ್ಟಿದ್ದರು.ಈ ಪ್ರಕರಣ ನಡೆದ ಒಂದೇ ವಾರದಲ್ಲಿ ಶ್ರೇಷ್ಠಾ ಅವರನ್ನು ಬಹರೈಚ್ ಎಂಬಲ್ಲಿಗೆ ವರ್ಗ ಮಾಡಲಾಗಿದೆ.

ಶ್ರೇಷ್ಠಾ ಅವರು ದಂಡ ವಿಧಿಸಿದ್ದ ಪ್ರಕರಣದ ಬಗ್ಗೆ ಬಿಜೆಪಿಯ 11 ಶಾಸಕರು ಮತ್ತು ಸಂಸದರು ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಅವರಿಗೆ ದೂರು ನೀಡಿದ್ದರು. ಬಿಜೆಪಿ ನಾಯಕರ ವಿರುದ್ಧ ಕ್ರಮ ತೆಗೆದುಕೊಂಡ ಪೊಲೀಸ್ ಅಧಿಕಾರಿಯನ್ನು ಎತ್ತಂಗಡಿ ಮಾಡಬೇಕೆಂದು ಈ ಶಾಸಕ, ಸಂಸದರು ಹೈಕಮಾಂಡ್ ಮೇಲೆ ಒತ್ತಡ  ಹೇರಿದ್ದರು ಎನ್ನಲಾಗಿದೆ.

ADVERTISEMENT

‘ಶ್ರೇಷ್ಠಾ ಅವರು ಮುಖ್ಯಮಂತ್ರಿ ಆದಿತ್ಯನಾಥ ಮತ್ತು ಇತರ ನಾಯಕರ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ. ಆ ಕಾರಣದಿಂದಲೇ ಅವರನ್ನು ಎತ್ತಂಗಡಿ ಮಾಡುವಂತೆ ಒತ್ತಾಯಿಸಿದ್ದೆವು’ ಎಂದು ಬಿಜೆಪಿ ನೇತಾರ ಮುಖೇಶ್ ಭಾರದ್ವಾಜ್ ಹೇಳಿದ್ದಾರೆ.

ಜೂನ್ 22ರಂದು ಠಾಕೂರ್ ಮತ್ತು ಇತರ ಪೊಲೀಸರು ಸೈನಾ ಪ್ರದೇಶದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಹೆಲ್ಮೆಟ್ ಧರಿಸದೆ ಬಂದ ಮೋಟಾರ್ ವಾಹನ ಸವಾರರೊಬ್ಬರಿಗೆ 200 ರೂಪಾಯಿ ದಂಡ ವಿಧಿಸಿದ್ದಾರೆ. ತಾವು ಬಿಜೆಪಿ ನಾಯಕ ಪ್ರಮೋದ್ ಕುಮಾರ್, ತಮ್ಮ ಪತ್ನಿ ಬುಲಂದ್‌ಶಹರ್ ಜಿಲ್ಲಾ ಪಂಚಾಯತ್ ಸದಸ್ಯೆ ಎಂದರೂ , ಪೊಲೀಸರು ಸುಮ್ಮನೆ ಬಿಡಲಿಲ್ಲ.

ಶ್ರೇಷ್ಠಾ ಅವರು ಬಿಜೆಪಿ ಕಾರ್ಯಕರ್ತರ ಜೊತೆ ನಡೆಸಿದ ಚರ್ಚೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಅದರಲ್ಲಿ ಶ್ರೇಷ್ಠಾ ಅವರು, ‘ನೀವು (ಬಿಜೆಪಿ ಕಾರ್ಯಕರ್ತರು) ನಿಮ್ಮ ಪಕ್ಷಕ್ಕೆ ಕೆಟ್ಟ ಹೆಸರು ತರುತ್ತಿದ್ದೀರಿ. ನೀವು ಹೀಗೆಯೇ ಮಾಡುತ್ತಿದ್ದರೆ ನಿಮ್ಮನ್ನು ಬಿಜೆಪಿ ಗೂಂಡಾಗಳು ಎಂದು ಕರೆಯುತ್ತಾರೆ’ ಎಂದು ಹೇಳಿರುವುದು ವಿಡಿಯೊದಲ್ಲಿ ಕೇಳಿಬಂದಿದೆ. 

‘ಶನಿವಾರ 200 ಮಂದಿ ಪೊಲೀಸರನ್ನು ವರ್ಗ ಮಾಡಲಾಗಿದೆ. ಅವರ ಜೊತೆ ಶ್ರೇಷ್ಠಾ ಅವರ ಹೆಸರಿದ್ದು, ಇದು ಮಾಮೂಲಿ ವರ್ಗಾವಣೆ’ ಎಂದು ಗೃಹ ಇಲಾಖೆ ಸ್ಪಷ್ಟನೆ ನೀಡಿದೆ.
***

ನಿಲ್ಲದ ಭ್ರಷ್ಟಾಚಾರ: ಸಚಿವರಿಂದ ರಾಜೀನಾಮೆ ಬೆದರಿಕೆ
ಲಖನೌ: 
‘ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ರಾಜ್ಯದ ಭ್ರಷ್ಟಾಚಾರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದ್ದರಿಂದ ನಾನು ಸರ್ಕಾರವನ್ನು ತ್ಯಜಿಸುತ್ತೇನೆ’ ಎಂದು ಬಿಜೆಪಿ ಮಿತ್ರ ಪಕ್ಷದ ಸಚಿವರೊಬ್ಬರು ಯೋಗಿ ಆದಿತ್ಯನಾಥ ಅವರಿಗೆ ಶನಿವಾರ ಬೆದರಿಕೆ ಒಡ್ಡಿರುವ ಘಟನೆ ನಡೆದಿದೆ.

ಸುಹೇಲ್‌ದೇವ್ ಭಾರತ ಸಮಾಜ ಪಕ್ಷ(ಸಿಬಿಎಸ್ಪಿ) ಅಧ್ಯಕ್ಷ ಓಂ ಪ್ರಕಾಶ್ ರಾಜಭರ್ ಈ ರೀತಿ ಬೆದರಿಕೆ ಹಾಕುವ ಮೂಲಕ ಯೋಗಿ ಆದಿತ್ಯನಾಥ್ ಅವರನ್ನು ಮುಜುಗರಕ್ಕೆ ಸಿಲುಕಿಸಿದ್ದಾರೆ.

‘ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಅಧಿಕಾರಿಗಳು ಸಚಿವರ ಮಾತು ಕೇಳುತ್ತಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಬದಲಾವಣೆಯಾಗುತ್ತದೆ ಎಂದು ಜನ ನಂಬಿದ್ದರು. ಆದರೆ ಯಾವುದೇ ಬದಲಾವಣೆಯಾಗದಿರುವುದು ದುರದೃಷ್ಟಕರ. ಹೀಗೆಯೇ ಮುಂದುವರಿದರೆ ನಾನು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ’ ಎಂದು ಸಂಪುಟದ ಸಚಿವರೂ ಆಗಿರುವ ರಾಜಭರ್ ಹೇಳಿದರು.

‘ಘಾಜಿಪುರ ಜಿಲ್ಲಾಧಿಕಾರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅವರು ಸಮಾಜವಾದಿ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ’ ಎಂದು ಈ ಹಿಂದೆ ಆರೋಪಿಸಿದ್ದ ರಾಜಭರ್, ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದರು. ಆದರೆ ಯೋಗಿ ಅವರನ್ನು ವರ್ಗಾವಣೆ ಮಾಡದಿರುವುದೇ ರಾಜಭರ್ ಅವರ ಈ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ರಾಜ್ಯ ಸರ್ಕಾರದಲ್ಲಿ ಎಸ್‌ಬಿಎಸ್ಪಿ ನಾಲ್ಕು ಸ್ಥಾನಗಳನ್ನು ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.