ADVERTISEMENT

ಪ್ರತಿಭಾ ದಾಖಲೆ: ವಿದೇಶ ಪ್ರವಾಸ ವೆಚ್ಚ 205 ಕೋಟಿ ರೂಪಾಯಿ!

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST
ಪ್ರತಿಭಾ ದಾಖಲೆ: ವಿದೇಶ ಪ್ರವಾಸ ವೆಚ್ಚ 205 ಕೋಟಿ ರೂಪಾಯಿ!
ಪ್ರತಿಭಾ ದಾಖಲೆ: ವಿದೇಶ ಪ್ರವಾಸ ವೆಚ್ಚ 205 ಕೋಟಿ ರೂಪಾಯಿ!   

ನವದೆಹಲಿ (ಪಿಟಿಐ): ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ವಿದೇಶ ಪ್ರವಾಸಗಳಿಗೆ ಈವರೆಗೆ ಎಷ್ಟು ಖರ್ಚಾಗಿದೆ ಗೊತ್ತೇ? 205 ಕೋಟಿ ರೂಪಾಯಿ!

ಈ ವಿಷಯದಲ್ಲಿ ಅವರು ಈ ಹಿಂದಿನ ರಾಷ್ಟ್ರಪತಿಗಳೆಲ್ಲರನ್ನೂ ಮೀರಿಸಿದ್ದಾರೆ.

2007ರ ಜುಲೈನಲ್ಲಿ ಅಧಿಕಾರ ಸ್ವೀಕರಿಸಿದಾಗಿನಿಂದ ಈವರೆಗೆ ಪ್ರತಿಭಾ, ನಾಲ್ಕು ಖಂಡಗಳ 22 ದೇಶಗಳಿಗೆ 12 ಬಾರಿ ಪ್ರವಾಸ ಕೈಗೊಂಡಿದ್ದಾರೆ.  ಅವರ ಐದು ವರ್ಷದ ಅಧಿಕಾರಾವಧಿ ಪೂರ್ಣಗೊಳ್ಳಲು ಇನ್ನೂ 4 ತಿಂಗಳು ಬಾಕಿ ಇದೆ. ಈ ಅವಧಿಯಲ್ಲಿ ಅವರು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಪ್ರತಿಭಾ, ಪ್ರತಿ ಬಾರಿಯ ವಿದೇಶ ಪ್ರವಾಸಕ್ಕೂ ಬೋಯಿಂಗ್ 748-400 ವಿಮಾನ ಬಳಸುತ್ತಾರೆ. ಭೂತಾನ್ ಪ್ರವಾಸಕ್ಕೆ ಅವರು ಸಣ್ಣ ಜೆಟ್ ಬಳಸಿದ್ದರು ಎನ್ನುವ ಅಂಶವು ಮಾಹಿತಿ ಹಕ್ಕು ಅರ್ಜಿಗಳಿಂದ ಬಹಿರಂಗವಾಗಿದೆ.

ಅವರ ವಿದೇಶಿ ಪ್ರವಾಸದಲ್ಲಿ ವಸತಿ, ಸ್ಥಳೀಯ ಪ್ರವಾಸ, ನಿತ್ಯದ ಭತ್ಯೆ ಹಾಗೂ ಇತರ ಖರ್ಚಿಗಾಗಿ ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ 36 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಸಚಿವಾಲಯದ ಮಾಹಿತಿಯಿಂದ ತಿಳಿದು ಬಂದಿದೆ. ಪ್ರತಿಭಾ, ವಿದೇಶ ಪ್ರವಾಸದ ವಿವರ ಕೋರಿ ಮೂರು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ ಅಧಿಕಾರಿಗಳು ಮಾಹಿತಿ ಬಹಿರಂಗಕ್ಕೆ  ಹಿಂದೇಟು ಹಾಕಿದ್ದರು.

ಬಾಕಿ ಪಾವತಿ: ವಿದೇಶ ಪ್ರವಾಸಗಳಲ್ಲಿ  ಅವರ ವಿಮಾನಯಾನ ಶುಲ್ಕದ ಮೊತ್ತ 169 ಕೋಟಿ ರೂಪಾಯಿ! ಈ ಪೈಕಿ ಸುಮಾರು ರೂ 153 ಕೋಟಿಯನ್ನು ಮಾತ್ರವೇ ರಕ್ಷಣಾ ಸಚಿವಾಲಯವು ಏರ್ ಇಂಡಿಯಾಗೆ ಪಾವತಿಸಿದ್ದು, ಇನ್ನೂ ರೂ 16 ಕೋಟಿ ಬಾಕಿ ಇದೆ. 

 ಪ್ರತಿಭಾ, ಈವರೆಗೆ ಬ್ರೆಜಿಲ್, ಮೆಕ್ಸಿಕೊ, ವಿಯೆಟ್ನಾಂ, ಇಂಡೊನೇಷ್ಯಾ, ಸ್ಪೇನ್, ಪೋಲೆಂಡ್, ರಷ್ಯ, ತಜಿಕಿಸ್ತಾನ, ಬ್ರಿಟನ್‌ಸೈಪ್ರಸ್, ಚೀನಾ, ಲಾವೋಸ್, ಕಾಂಬೋಡಿಯಾ, ಐರೋಪ್ಯ ಒಕ್ಕೂಟ, ಸಿರಿಯಾ, ಮಾರಿಷಸ್, ದಕ್ಷಿಣ ಕೊರಿಯಾ, ಸ್ವಿಟ್ಜರ‌್ಲೆಂಡ್ ಹಾಗೂ ಆಸ್ಟ್ರಿಯಾ ದೇಶಗಳಿಗೆ ಭೇಟಿ ನೀಡಿದ್ದಾರೆ.
 
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ತಮ್ಮ ಅಧಿಕಾರಾವಧಿಯಲ್ಲಿ ಏಳು ಬಾರಿ ವಿದೇಶ ಪ್ರವಾಸ ಮಾಡಿದ್ದರು. ಅದಕ್ಕೂ ಹಿಂದೆ ಕೆ.ಆರ್.ನಾರಾಯಣನ್ ಅವರು 10 ದೇಶಗಳನ್ನು ಒಳಗೊಂಡಂತೆ 6 ಬಾರಿ ವಿದೇಶ ಪ್ರವಾಸ ಮಾಡಿದ್ದರು. ಇನ್ನು ಶಂಕರ್ ದಯಾಳ್ ಶರ್ಮ ನಾಲ್ಕು ಬಾರಿಯ ವಿದೇಶ ಪ್ರವಾಸದಲ್ಲಿ 16 ದೇಶಗಳಿಗೆ ಭೇಟಿ ನೀಡಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.