ADVERTISEMENT

ಪ್ರತಿಯೊಬ್ಬರಿಗೂ ಗೋಮಾಂಸ ಸೇವಿಸುವ ಹಕ್ಕಿದೆ: ಕೇಂದ್ರ ಸಚಿವ ರಾಮ್‌ದಾಸ್ ಅಠವಲೆ

ಏಜೆನ್ಸೀಸ್
Published 15 ಜುಲೈ 2017, 14:03 IST
Last Updated 15 ಜುಲೈ 2017, 14:03 IST
ರಾಮ್‌ದಾಸ್ ಅಠವಲೆ (ಸಂಗ್ರಹ ಚಿತ್ರ)
ರಾಮ್‌ದಾಸ್ ಅಠವಲೆ (ಸಂಗ್ರಹ ಚಿತ್ರ)   

ಮುಂಬೈ: ಪ್ರತಿಯೊಬ್ಬರಿಗೂ ಗೋಮಾಂಸ ಸೇವಿಸುವ ಹಕ್ಕಿದ್ದು, ಗೋರಕ್ಷಣೆಯ ಹೆಸರಿನಲ್ಲಿ ನರಭಕ್ಷಕರಾಗುವ ಹಕ್ಕು ಯಾರಿಗೂ ಇಲ್ಲ ಎಂದು ಕೇಂದ್ರ ಸಚಿವ ರಾಮ್‌ದಾಸ್ ಅಠವಲೆ ಹೇಳಿದ್ದಾರೆ. ಭಾರತೀಯ ರಿಪಬ್ಲಿಕನ್ ಪಕ್ಷದ ನಾಯಕರಾಗಿರುವ ಅವರು ಸಾಮಾಜಿಕ ನ್ಯಾಯ ಇಲಾಖೆಯ ರಾಜ್ಯ ಖಾತೆ ಸಚಿವರಾಗಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರಕ್ಕಿಳಿಯುವವರ ವಿರುದ್ಧ ತಮ್ಮ ಪಕ್ಷ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಹೇಳಿದ್ದಾರೆ.

‘ಗೋಮಾಂಸ ತಿನ್ನಬೇಕೆಂದು ಯಾರು ಬಯಸುತ್ತಾರೋ, ಅದು ಅವರ ಹಕ್ಕು. ಇಂದು ಗೋರಕ್ಷಣೆಯ ಹೆಸರಿನಲ್ಲಿ ವಾಹನಗಳನ್ನು ತಡೆದು ಪ್ರಾಣಿಗಳ ಮಾಂಸ ಸಾಗಾಟ ಮಾಡುವವರ ಮೇಲೆ ಗೋರಕ್ಷಕರು ಹಲ್ಲೆ ನಡೆಸುತ್ತಿದ್ದಾರೆ. ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ಸಮರ್ಥಿಸಲು ಸಾಧ್ಯವಿಲ್ಲ’ ಎಂದು ಅಠವಲೆ ಹೇಳಿದ್ದಾರೆ.

ADVERTISEMENT

ಗೋಮಾಂಸ ಸಾಗಾಟ ಮಾಡುತ್ತಿದ್ದಾರೆಂದು ಶಂಕಿಸಿ ಇತ್ತೀಚೆಗೆ ನಾಗ್ಪುರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿರುವುದನ್ನು ಉಲ್ಲೇಖಿಸಿದ ಅವರು, ‘ಪ್ರತಿಯೊಬ್ಬರಿಗೂ ಗೋಮಾಂಸ ತಿನ್ನುವ ಹಕ್ಕಿದೆ. ಕುರಿಯ ಮಾಂಸ ದುಬಾರಿಯಾಗಿರುವುದರಿಂದ ಜನ ಗೋಮಾಂಸ ತಿನ್ನುತ್ತಾರೆ. ನಾಗ್ಪುರ ಘಟನೆಯನ್ನು ಖಂಡಿಸುತ್ತೇನೆ’ ಎಂದು ಹೇಳಿದ್ದಾರೆ.

ಗೋರಕ್ಷಣೆಯ ಹೆಸರಿನಲ್ಲಿ ನಡೆಸಲಾಗುತ್ತಿರುವ ಹಲ್ಲೆ, ದಾಳಿಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗೆ ಕಳಂಕ ತರುವ ಸಂಚು ಅಡಗಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.