ADVERTISEMENT

ಪ್ರಧಾನಿಗೆ ಮತ್ತೆ ಪತ್ರ ಬರೆದ ಕೇಜ್ರಿವಾಲ್‌

ಅಧಿಕಾರಿಗಳ ಮುಷ್ಕರ ಕೊನೆಗೊಳಿಸಲು ಮಧ್ಯಪ್ರವೇಶಿಸುವಂತೆ ಕೋರಿಕೆ

ಪಿಟಿಐ
Published 15 ಜೂನ್ 2018, 19:30 IST
Last Updated 15 ಜೂನ್ 2018, 19:30 IST
ಕೇಜ್ರಿವಾಲ್‌
ಕೇಜ್ರಿವಾಲ್‌   

ನವದೆಹಲಿ: ದೆಹಲಿ ಸರ್ಕಾರದ ಐಎಎಸ್‌ ಅಧಿಕಾರಿಗಳ ಮುಷ್ಕರ ಕೊನೆಗೊಳಿಸಲು ಮಧ್ಯಪ್ರವೇಶಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೊಸ ಪತ್ರ ಬರೆದಿದ್ದಾರೆ.

ಲೆಫ್ಟಿನೆಂಟ್‌ ಗವರ್ನರ್‌ ಅನಿಲ್ ಬೈಜಾಲ್‌ ಅವರ ಕಚೇರಿಯಲ್ಲಿ ನಡೆಸಿರುವ ಧರಣಿಯನ್ನು ಟೀಕಿಸಿರುವವರಿಗೆ ಉತ್ತರ ನೀಡಿರುವ ಕೇಜ್ರಿವಾಲ್‌, ‘ಇದು ಸ್ವಂತಕ್ಕಾಗಿ ಮಾಡುತ್ತಿರುವ ಧರಣಿ ಅಲ್ಲ, ದೆಹಲಿಯ ಜನರ ಅನುಕೂಲಕ್ಕಾಗಿ ಧರಣಿ ಮಾಡುತ್ತಿದ್ದೇನೆ’ ಎಂದಿದ್ದಾರೆ.

ಕೇಜ್ರಿವಾಲ್‌ ಮತ್ತು ಅವರ ಸಂಪುಟದ ಕೆಲವು ಸಚಿವರ ಧರಣಿ ಐದನೇ ದಿನ ಪೂರ್ಣಗೊಳಿಸಿದೆ. ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಕೇಜ್ರಿವಾಲ್‌ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಎಎಪಿ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ತೊಡಕು ಉಂಟು ಮಾಡಲು ಅಧಿಕಾರಶಾಹಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ADVERTISEMENT

‘ನಾನು ಮತ್ತು ಮನೀಶ್‌ ಸಿಸೋಡಿಯಾ (ಉಪ ಮುಖ್ಯಮಂತ್ರಿ) ಗುರುವಾರ ಲೆಫ್ಟಿನೆಂಟ್‌ ಗವರ್ನರ್‌ (ಎಲ್‌ಜಿ) ಅನಿಲ್‌ ಬೈಜಾಲ್‌ ಅವರಿಗೆ  ಪತ್ರ ಬರೆದಿದ್ದೇವೆ. ವಾಟ್ಸ್‌ಆ್ಯಪ್‌ನಲ್ಲಿ ಸಂದೇಶವನ್ನೂ ಕಳುಹಿಸಿದ್ದೇವೆ. ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪ್ರಧಾನಿಗೆ ನಾನು ಬರೆದ ಪತ್ರಕ್ಕೂ ಯಾವುದೇ ಪ್ರತಿಕ್ರಿಯೆ ಇಲ್ಲ. ಹಾಗಾಗಿ ಮತ್ತೆ ಪತ್ರೆ ಬರೆದಿದ್ದೇನೆ’ ಎಂದು ವಿಡಿಯೊ ಸಂದೇಶದಲ್ಲಿ ಕೇಜ್ರಿವಾಲ್‌ ಹೇಳಿದ್ದಾರೆ.

‘ಪ್ರಧಾನಿಯವರೇ, ಹಸ್ಮುಖ್‌ ಅದಿಯಾ, ನೃಪೇಂದ್ರ ಮಿಶ್ರಾ, ಪ್ರದೀಪ್‌ ಸಿನ್ಹಾ, ಆರ್.ಎನ್‌. ಚೌಬೆ, ಸುಶೀಲ್‌ ಕುಮಾರ್‌ ಅವರು ಪ್ರತಿದಿನ ಕಚೇರಿಗೆ ಬರುತ್ತಾರೆ. ಆದರೆ ನೀವು ಕರೆದ ಯಾವುದೇ ಸಭೆಗೆ ಬರುವುದಿಲ್ಲ. ಅವರನ್ನು ಕೇಳಿದರೆ ಮುಷ್ಕರ ಮಾಡುತ್ತಿಲ್ಲ ಎನ್ನುತ್ತಾರೆ ಎಂಬ ಸ್ಥಿತಿಯನ್ನು ಊಹಿಸಿಕೊಳ್ಳಿ. ಇಂತಹ ಸ್ಥಿತಿಯಲ್ಲಿ ನೀವು ಕೆಲಸ ಮಾಡುವುದು ಸಾಧ್ಯವೇ’ ಎಂದು ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

**

ಸೋಮವಾರದಿಂದ ಸಹಿ ಸಂಗ್ರಹ

‘ಮುಷ್ಕರವನ್ನು ಕೊನೆಗೊಳಿಸುವಂತೆ ಪ್ರಧಾನಿ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ. ಆದರೆ ಭಾನುವಾರದ ಬಳಿಕವೂ ಪರಿಸ್ಥಿತಿ ಸರಿ ಹೋಗದಿದ್ದರೆ ಪ್ರಧಾನಿ ಮನೆಗೆ ಜನರ ಜತೆಗೆ ಹೋಗುತ್ತೇವೆ.

‘ನಗರದಲ್ಲಿರುವ 10 ಲಕ್ಷ ಮನೆಗಳಿಗೆ ನಮ್ಮ ಕಾರ್ಯಕರ್ತರು ಭೇಟಿ ಕೊಟ್ಟು, ದೆಹಲಿ ಸರ್ಕಾರದ ಕಾರ್ಯನಿರ್ವಹಣೆಗೆ ಆಗುತ್ತಿರುವ ಅಡ್ಡಿ ಮತ್ತು ದೆಹಲಿಗೆ ಪೂರ್ಣ ರಾಜ್ಯ ಸ್ಥಾನ ನೀಡಿಕೆ ಬಗ್ಗೆ ಸಹಿ ಸಂಗ್ರಹ ಮಾಡಲಿದ್ದಾರೆ. ಬಳಿಕ ಈ ಹತ್ತು ಲಕ್ಷ ಕುಟುಂಬಗಳು, ಈ ಬಗ್ಗೆ ಚಳವಳಿ ನಡೆಸಲಿವೆ’ ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

**

ನನ್ನ ಧರಣಿಯನ್ನು ಎ.ಸಿ–ಸೋಫಾ ಧರಣಿ ಎನ್ನಲಾಗುತ್ತಿದೆ. ಇದು ನನ್ನ ಮಕ್ಕಳಿಗೆ ಕೆಲಸ ಕೊಡಿಸಲು ಅಲ್ಲ. ಸೋಫಾದಲ್ಲಿ ಮಲಗುವುದು ಅಷ್ಟೊಂದು ಸುಲಭವೇ.

–ಅರವಿಂದ ಕೇಜ್ರಿವಾಲ್‌, ದೆಹಲಿ ಸಿ.ಎಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.