ADVERTISEMENT

ಪ್ರಧಾನಿ ತಲೆದಂಡಕ್ಕೆ ಬಿಗಿ ಪಟ್ಟು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 19:30 IST
Last Updated 22 ಆಗಸ್ಟ್ 2012, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್): ಸಂಸತ್‌ನಲ್ಲಿ ಎರಡನೇ ದಿನವಾದ ಬುಧವಾರವೂ ಕಲ್ಲಿದ್ದಲು ಗದ್ದಲವು ಕಲಾಪ  ನುಂಗಿ ಹಾಕಿತು. ವಿರೋಧ ಪಕ್ಷದವರು ಪ್ರಧಾನಿ ಮನಮೋಹನ್ ಸಿಂಗ್ ರಾಜೀನಾಮೆಗೆ ಬಿಗಿಪಟ್ಟು ಹಿಡಿದು ಕೋಲಾಹಲ ಎಬ್ಬಿಸಿದ ಕಾರಣ ಉಭಯ ಸದನಗಳನ್ನೂ ಗುರುವಾರಕ್ಕೆ ಮುಂದೂಡಲಾಯಿತು.

ಬೆಳಿಗ್ಗೆ 11 ಗಂಟೆಗೆ ಲೋಕಸಭೆ ಶುರುವಾಗಿದ್ದೇ ತಡ ಬಿಜೆಪಿ ಸದಸ್ಯರು ಪ್ರಧಾನಿ ರಾಜೀನಾಮೆಗೆ ಆಗ್ರಹಿಸಿ ಘೋಷಣೆ ಕೂಗಲು ಶುರು ಮಾಡಿದರು.

ಗದ್ದಲದ ನಡುವೆಯೇ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಬೇಕಾಯಿತು. ರಾಜ್ಯಸಭೆಯಲ್ಲಿಯೂ ಕಲ್ಲಿದ್ದಲು ಹಗರಣ ಪ್ರತಿಧ್ವನಿಸಿ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಅನಂತರ ಮತ್ತೆ ಉಭಯ ಸದನಗಳಲ್ಲಿ ಕಲಾಪ ಆರಂಭವಾದಾಗಲೂ ಗಲಾಟೆ ನಿಲ್ಲಲಿಲ್ಲ. ಆಗ ಮತ್ತೊಮ್ಮೆ ಮಧ್ಯಾಹ್ನ 2 ಗಂಟೆವರೆಗೆ ಮುಂದೂಡಬೇಕಾಯಿತು.

ಮಧ್ಯಾಹ್ನ 2 ಗಂಟೆಯ ನಂತರ ಸಭೆ ಸೇರಿದಾಗಲೂ ಪರಿಸ್ಥಿತಿ ತಿಳಿಯಾಗಲಿಲ್ಲ. ಈ ನಡುವೆ, ಲೋಕಸಭೆಯ ಉಪಾಧ್ಯಕ್ಷ ಕರಿಯಾ ಮುಂಡಾ ಅವರು ಪ್ರವಾಹದ ಬಗ್ಗೆ ಮಾತನಾಡಲು ಜೆಡಿಯು ಸದಸ್ಯ ರಾಜೀವ್ ರಂಜನ್ ಸಿಂಗ್ ಲಲ್ಲನ್ ಅವರಿಗೆ ಅವಕಾಶ ಮಾಡಿಕೊಟ್ಟರು. ಆದರೆ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದತ್ತ ನುಗ್ಗಿ ಪ್ರತಿಭಟನೆ ಮಾಡಿದಾಗ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

`ವಿರೋಧ ಪಕ್ಷದವರು ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಕುರಿತ ಚರ್ಚೆಯಿಂದ ಪಲಾಯನ ಮಾಡುತ್ತಿದ್ದಾರೆ~ ಎಂದು ಸಂಸದೀಯ ವ್ಯವಹಾರ ಸಚಿವ ಪವನ್ ಕುಮಾರ್ ಬನ್ಸಾಲ್ ಆರೋಪಿಸಿದರು. `ಸರ್ಕಾರ ಹಂಚಿಕೆಯಲ್ಲಿ ಯಾವ ತಪ್ಪನ್ನೂ ಮಾಡಿಲ್ಲ. ದೇಶದ ಹಿತಾಸಕ್ತಿ ಹಾಗೂ ಅಭಿವೃದ್ಧಿಗೆ ಅನುಗುಣವಾಗಿ ನಿಕ್ಷೇಪ ಹಂಚಿಕೆ ಮಾಡಲಾಗಿದೆ~ ಎಂದು ಸಮರ್ಥಿಸಿಕೊಂಡರು.

ರಾಜ್ಯಸಭೆಯಲ್ಲಿ ಮಧ್ಯಾಹ್ನದ ನಂತರ ಮತ್ತೆ ಕಲಾಪ ಆರಂಭಗೊಂಡಾಗ ವಿರೋಧ ಪಕ್ಷದ ಸದಸ್ಯರು ಗದ್ದಲ ನಡೆಸಿದರು. ಆಗ ಕಲಾಪವನ್ನು ಒಂದು ದಿನ ಮುಂದೆ ಹಾಕಲಾಯಿತು. `ಬಿಜೆಪಿ ಚರ್ಚೆಯಿಂದ ದೂರ ಓಡುತ್ತಿದೆ~ ಎಂದು ಸಂಸದೀಯ ವ್ಯವಹಾರ ಖಾತೆ ರಾಜ್ಯ ಸಚಿವ ರಾಜೀವ್ ಶುಕ್ಲಾ ಲೇವಡಿ ಮಾಡಿದರು.

ಪ್ರತಿಪಕ್ಷದಲ್ಲೇ ಗೊಂದಲ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ವಿಷಯದ ಚರ್ಚೆ ಕುರಿತು ವಿರೋಧ ಪಕ್ಷದಲ್ಲಿ ಭಿನ್ನಾಭಿಪ್ರಾಯ ಮೂಡಿದೆ. 

ಬಿಜೆಪಿ ಚರ್ಚೆ ಬೇಡ ಎಂದರೆ, ಜೆಡಿಯು ಚರ್ಚೆಯ ಪರವಾಗಿ ನಿಂತಿದೆ. `ನಾವು ಸಂಸತ್‌ನಲ್ಲಿ ಚರ್ಚೆಗೆ ಸಿದ್ಧ. ಸರ್ಕಾರ ಈ ವಿಷಯದಲ್ಲಿ ಸ್ಪಷ್ಟನೆ ನೀಡಬೇಕು~ ಎಂದು ಜೆಡಿಯು ಮುಖಂಡ ಶಿವಾನಂದ ತಿವಾರಿ ಹೇಳಿದ್ದಾರೆ.

ಐದು ರಾಜ್ಯಗಳ ವಿರೋಧ
ಛತ್ತೀಸ್‌ಗಡ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳ ವಿರೋಧ ಇದ್ದ ಕಾರಣ ಹರಾಜಿನ ಮೂಲಕ ಕಲ್ಲಿದ್ದಲು ಹಂಚಿಕೆ ಸಾಧ್ಯವಾಗಲಿಲ್ಲ ಎಂದು ಕಲ್ಲಿದ್ದಲು ಸಚಿವ ಶ್ರೀಕುಮಾರ್ ಜೈಸ್ವಾಲ್ ತಿಳಿಸಿದ್ದಾರೆ.  ಕಲ್ಲಿದ್ದಲು ಹಗರಣಕ್ಕೆ ಯಾವುದೇ ಕಾರಣಕ್ಕೂ ಪ್ರಧಾನಿ ಮನಮೋಹನ್ ಸಿಂಗ್ ಹೊಣೆಯಲ್ಲ ಎಂದ ಅವರು, `ರಾಜಸ್ತಾನ, ಛತ್ತೀಸ್‌ಗಡ, ಒಡಿಶಾ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಹರಾಜಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈ ರಾಜ್ಯಗಳ ಮುಖ್ಯಮಂತ್ರಿಗಳು ಬರೆದಿರುವ ಪತ್ರ ಬಹಿರಂಗಪಡಿಸುವೆ ಎಂದರು.

ಕಲ್ಲಿದ್ದಲು ನಿಕ್ಷೇಪಗಳನ್ನು ಸ್ವರ್ಧಾತ್ಮಕ  ಹರಾಜಿನ ಮೂಲಕ ಹಂಚಿಕೆ ಮಾಡಲು 2004ರಲ್ಲಿ ಮೊದಲ ಬಾರಿ ನಿರ್ಧರಿಸಲಾಗಿತ್ತು. ಆದರೆ ಅಂಥ ಕಾರ್ಯವಿಧಾನವನ್ನು ಸರ್ಕಾರ ಇನ್ನೂ ಅಂತಿಮಗೊಳಿಸಿಲ್ಲ.
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.