ADVERTISEMENT

ಪ್ರಧಾನಿ ಮನಮೋಹನ್ ಸಿಂಗ್ ತೀರ್ಥ ಯಾತ್ರೆಗೆ ತೆರಳಲಿ-ಗಡ್ಕರಿ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ಡೆಹ್ರಾಡೂನ್ (ಪಿಟಿಐ): ಭ್ರಷ್ಟಾಚಾರ ತಡೆಯಲು ವಿಫಲರಾಗಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ತೀರ್ಥಯಾತ್ರೆಗೆ ಹೋಗುವುದು ಒಳಿತು ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಭಾನುವಾರ ಇಲ್ಲಿ ವ್ಯಂಗ್ಯವಾಡಿದ್ದಾರೆ.

ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರವನ್ನು ತಡೆಯಲಾಗುತ್ತಿಲ್ಲ ಎಂದು ಪ್ರಧಾನಿ ಅಸಹಾಯಕತೆ ವ್ಯಕ್ತಪಡಿಸಿರುವುದರಿಂದ ಅವರು ಹುದ್ದೆಯನ್ನು ತ್ಯಜಿಸುವುದೇ ಸರಿಯಾದ ಕ್ರಮ ಎಂದು ಹೇಳಿದರು.

`ಮನಮೋಹನ್ ಸಿಂಗ್ ಅವರೇ ನೀವು ಅಸಹಾಯಕರಾಗಿದ್ದರೆ ವಿಶ್ರಾಂತಿ ಪಡೆದು ಬದರಿನಾಥ, ಕೇದಾರನಾಥ ಅಥವಾ ಸ್ವರ್ಣ ಮಂದಿರಕ್ಕೆ ಯಾತ್ರೆ ಹೋಗಿ~ ಎಂದು ಗಡ್ಕರಿ ಹೇಳಿದರು.

2ಜಿ ತರಂಗಾಂತರ ಹಗರಣಕ್ಕೆ ತಾವೊಬ್ಬರೇ ಹೊಣೆಗಾರರಲ್ಲ, ಕಾಂಗ್ರೆಸ್‌ನ ಅನೇಕ ಮುಖಂಡರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ದೂರಸಂಪರ್ಕ ಮಾಜಿ ಸಚಿವ ಎ.ರಾಜಾ ಅವರು ಅನೇಕ ಬಾರಿ ಹೇಳಿದ್ದಾರೆ. ಇನ್ನೂ ಕೆಲವು ದಾಖಲೆಗಳನ್ನು ತಾವು ಸೋಮವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಿದ್ದು, ಇದರಿಂದ ಸಾಕಷ್ಟು ಗುಟ್ಟುಗಳು ಹೊರಬೀಳಲಿವೆ ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ  ತಮಗೆ ತಿಳಿಸಿದ್ದಾರೆ ಎಂದು ಅವರು ಹೇಳಿದರು.
 

ಪ್ರಧಾನಿ ಅಭ್ಯರ್ಥಿ ನಿರ್ಧರಿಸಿಲ್ಲ
ಹೋಶಿಯಾರ್‌ಪುರ (ಪಂಜಾಬ್ ) (ಪಿಟಿಐ): `ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ತನ್ನ ಪ್ರಧಾನಿ ಅಭ್ಯರ್ಥಿಯನ್ನು ಇನ್ನೂ ನಿರ್ಧರಿಸಿಲ್ಲ, ಸೂಕ್ತ ಸಮಯದಲ್ಲಿ ಹೆಸರನ್ನು ಬಹಿರಂಗಪಡಿಸಲಾಗುತ್ತದೆ~ ಎಂದು ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಹೇಳಿದ್ದಾರೆ.

ಎಲ್.ಕೆ.ಅಡ್ವಾಣಿ ಅವರ ಉದ್ದೇಶಿತ `ಜನ ಚೇತನ ಯಾತ್ರೆ~ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಭ್ರಷ್ಟಾಚಾರದ ಪಿಡುಗನ್ನು ಎತ್ತಿತೋರಿಸುವುದು ಇದರ ಉದ್ದೇಶ~ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.