ನವದೆಹಲಿ (ಪಿಟಿಐ): ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಹಾಗೂ ರೈಲು ದರ ಏರಿಕೆಗೆ ತೃಣಮೂಲ ಕಾಂಗ್ರೆಸ್ ಭಾರಿ ಪ್ರತಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ, ಯಾವುದೇ ಕಠಿಣ ನಿರ್ಧಾರ ಕೈಗೊಳ್ಳುವ ಮುನ್ನ ಮಿತ್ರ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ದೂರದರ್ಶನದಲ್ಲಿ ಬಜೆಟ್ ಪ್ರತಿಕ್ರಿಯೆ ನೀಡುತ್ತಿದ್ದ ಪ್ರಧಾನಿ, ಸಮ್ಮಿಶ್ರ ಸರ್ಕಾರದಲ್ಲಿ ಕೆಲವು ಕಷ್ಟಗಳು ಎದುರಾಗುತ್ತವೆ. ಆದರೆ, ಶೇ 8-9ರ ದರದಲ್ಲಿ ತ್ವರಿತ, ಸುಸ್ಥಿರ ಹಾಗೂ ಸಮಾನ ಅಭಿವೃದ್ಧಿ ಸಾಧಿಸಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ಮಮತಾ ಬ್ಯಾನರ್ಜಿ ತರಹದ ಮಿತ್ರರು ಸರ್ಕಾರದ ಸುಧಾರಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆಯೇ ಎಂಬ ಪ್ರಶ್ನೆಗೆ, ಕಷ್ಟಗಳು ಇದ್ದೇ ಇವೆ. ಮುಂದೆಯೂ ಕಷ್ಟಗಳು ಎದುರಾಗುತ್ತವೆ. ಸಮ್ಮಿಶ್ರ ಸರ್ಕಾರ ನಿರ್ವಹಿಸುವಾಗ ಈ ಒತ್ತಡಗಳು ಇರುತ್ತವೆ. ಅಂತಿಮವಾಗಿ ಸರ್ಕಾರ ಆಡಳಿತ ನಡೆಸಬೇಕಾದರೆ ಅದು ಆರ್ಥಿಕತೆಯನ್ನು ನಿರ್ವಹಿಸಬಲ್ಲ ಸುಸ್ಥಿರ ಕಾರ್ಯತಂತ್ರ ಅನುಸರಿಸಬೇಕಾಗುತ್ತದೆ.
ಕಠಿಣವಾದ ಆದರೆ ಅಗತ್ಯವಾದ ನಿರ್ಧಾರ ಕೈಗೊಳ್ಳುವ ಮುನ್ನ ಮಿತ್ರಪಕ್ಷಗಳನ್ನು ಸಂಪರ್ಕಿಸುತ್ತೇವೆ ಎಂದು ಸಿಂಗ್ ಉತ್ತರಿಸಿದರು.ತೃಣಮೂಲ ಕಾಂಗ್ರೆಸ್ ವಿರೋಧದ ಹಿನ್ನೆಲೆಯಲ್ಲಿ ಬಹು ಬ್ರಾಂಡ್ ಚಿಲ್ಲರೆ ಮಾರಾಟದಲ್ಲಿ `ಎಫ್‌ಡಿಐ~ಯನ್ನು ಶೇ 51ಕ್ಕೆ ಏರಿಸುವ ನಿರ್ಧಾರವನ್ನು ತಡೆಹಿಡಿಯಲಾಗಿದ್ದು, ಪ್ರಧಾನಿ ಅವರ ಈ ಹೇಳಿಕೆ ಮಹತ್ವ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.