ADVERTISEMENT

ಪ್ರಧಾನಿ ಮೌನ ಮುರಿಯಲಿ- ಜಯಾ ಸವಾಲು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 18:30 IST
Last Updated 9 ಫೆಬ್ರುವರಿ 2011, 18:30 IST

ಚೆನ್ನೈ (ಪಿಟಿಐ): ಜಾಗತಿಕ ಆರ್ಥಿಕ ತಜ್ಞರಾದ ಪ್ರಧಾನಿ ಮನಮೋಹನ್ ಸಿಂಗ್ ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆ ಹಗರಣದ ಕುರಿತು ಮೌನ ಮುರಿದು ತಾವು ನಿರ್ದೋಷಿ ಎಂಬುದನ್ನು ಸಾಬೀತು ಮಾಡಬೇಕೆಂದು ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಒತ್ತಾಯಿಸಿದ್ದಾರೆ.ಇಲ್ಲದಿದ್ದರೆ ಜನರು ಕೇಂದ್ರ ಸರ್ಕಾರದಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಾರೆ. ಜಗತ್ತಿನ ಮುಂದೆ ಭಾರತ ನಗೆಪಾಟಲಿಗೆ ಈಡಾಗುತ್ತದೆಂದು ಹೇಳಿದ್ದಾರೆ.


ದೇವಾಸ್ ಮಲ್ಟಿಮೀಡಿಯಾ ಎಂಬ ಬೆಂಗಳೂರು ಮೂಲದ ಕಂಪೆನಿಗೆ 20 ವರ್ಷ ಅವಧಿಗೆ ಮೊಬೈಲ್ ಬ್ರಾಡ್‌ಬ್ಯಾಂಡ್‌ಗೆ ಅಗತ್ಯವಾದ  70 ಮೆಗಾಹರ್ಟ್ಜ್ ತರಂಗಾಂತರದ ಬಳಕೆಯ ಸಂಪೂರ್ಣ ಹಕ್ಕನ್ನು ಕೇವಲ 1000 ಕೋಟಿ ರೂಪಾಯಿಗೆ ನೀಡಲಾಗಿತ್ತು ಎಂದು ಅವರು ವಿವರಿಸಿದರು.ಕಳೆದ ವರ್ಷ ಕೇಂದ್ರ ಸರ್ಕಾರ 15 ಮೆಗಾಹರ್ಟ್ಜ್ ತರಂಗಾಂತರ ಬಳಕೆ ಹಕ್ಕಿಗೆ ರೂ 67,719 ಕೋಟಿಯನ್ನು ಹರಾಜು ಪ್ರಕ್ರಿಯೆಯಲ್ಲಿ ಪಡೆದಿದೆ. ಇದೇ ಅಂದಾಜಿನಲ್ಲಿ ಲೆಕ್ಕಹಾಕಿದರೆ ಎಸ್-ಬ್ಯಾಂಡ್‌ನ 70 ಮೆಗಾಹರ್ಟ್ಜ್ ತರಂಗಾಂತರ ಹಂಚಿಕೆಯಿಂದ ಕನಿಷ್ಠ 2 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಜಯಲಲಿತಾ ವಿವರಿಸಿದರು.


ಬಾಹ್ಯಾಕಾಶ ಆಯೋಗ 2010ರ ಜುಲೈನಲ್ಲೇ ಈ ಒಪ್ಪಂದ ರದ್ದತಿಗೆ ಶಿಫಾರಸು ಮಾಡಿದ್ದರೂ ಅದು ಜಾರಿಗೆ ಬಂದಿಲ್ಲ ಎಂದ ಅವರು, ಖಾಸಗಿ ಕಂಪೆನಿಗೆ ನೀಡಲಾಗಿರುವ ತರಂಗಾಂತರ ಬಳಕೆ ಹಕ್ಕನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.ರಾಷ್ಟ್ರದ ಅತ್ಯಮೂಲ ಸಂಪನ್ಮೂಲವಾದ ತರಂಗಾಂತರ ಹಂಚಿಕೆಯಲ್ಲಿ ನಿರ್ಲಕ್ಷ್ಯವಾದದ್ದಾದರೂ ಹೇಗೆ? ಇದರ ನಿಜವಾದ ಫಲಾನುಭವಿಗಳು ಯಾರು?- ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.ಯುಪಿಎ ಸರ್ಕಾರದ ಅವಧಿಯಲ್ಲಿ ಲಕ್ಷ ಕೋಟಿ ರೂಪಾಯಿಗಳ ಹಗರಣಗಳು ಒಂದೊಂದಾಗಿ ಬಯಲಾಗುತ್ತಿರುವುದು ರಾಷ್ಟ್ರೀಯ ಅಪಮಾನ ಎಂದು ಅವರು ಛೇಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.