
ಕಿಸ್ತ್‌ವಾರ್ (ಪಿಟಿಐ/ಐಎಎನ್ಎಸ್): ಪ್ರಧಾನಿ ಮನಮೋಹನಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಮಂಗಳವಾರ ಪೂರ್ವ ನಿಗದಿಯಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದರು. ಭಯೋತ್ಪಾದನೆ ವಿರುದ್ಧ ಇಡೀ ದೇಶ ಒಗ್ಗಟ್ಟಿನಿಂದ ಇದೆ ಎಂದು ಈ ಸಂದರ್ಭದಲ್ಲಿ ಪ್ರಧಾನಿ ಅವರು ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ.
ಉಭಯ ನಾಯಕರು ಸೋಮವಾರ ಉಗ್ರರ ದಾಳಿಯಿಂದಾಗಿ ಗಾಯಗೊಂಡ ಸೈನಿಕರನ್ನು ಇಲ್ಲಿನ ಬಾದಾಮಿ ಭಾಗ್ ಸೇನಾ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.
850 ಮೆಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಯೋಜನೆಗೆ ಶಂಕುಸ್ಥಾಪನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪ್ರಧಾನಿ ಅವರು ಭಯೋತ್ಪಾದನೆ ವಿರುದ್ಧ ಇಡೀ ದೇಶ ಒಗ್ಗಟ್ಟಿನಿಂದಿದೆ. ಉಗ್ರರು ಏನೇ ಮಾಡಿದರೂ ತಮ್ಮ ಉದ್ದೇಶದಲ್ಲಿ ಸಫಲರಾಗಲು ತಾವು ಬಿಡುವುದಿಲ್ಲ ಎಂಬ ಎಚ್ಚರಿಕೆ ಸಂದೇಶವನ್ನು ಉಗ್ರರಿಗೆ ನೀಡಿದರು.
ಇದೇ ವೇಳೆ ಅವರು ಉಗ್ರರೊಂದಿಗೆ ಕಾದಾಡಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಭೂಕಂಪದಿಂದ ಸಂತ್ರಸ್ತರಾದವರ ಪುನರ್ವಸತಿಗಾಗಿ 600 ಕೋಟಿ ರೂಗಳ ವಿಶೇಷ ಪ್ಯಾಕೇಜ್‌ನ್ನು ನೀಡಬೇಕೆಂದು ಪ್ರಧಾನಿ ಅವರಲ್ಲಿ ಮನವಿ ಮಾಡಿದರು.
ಇದೇ ಸಮಯದಲ್ಲಿ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನವು ಭಾರತದ ಗಡಿಯತ್ತ ಗುಂಡಿನ ದಾಳಿ ನಡೆಸಿದೆ. ಜೂನ್ ತಿಂಗಳಲ್ಲಿ ಪಾಕಿಸ್ತಾನ ಶಾಂತಿಯನ್ನು ಉಲ್ಲಂಘಿಸಿದ ನಾಲ್ಕನೆ ಪ್ರಕರಣ ಇದು.
1991ರಲ್ಲಿ ಕಣಿವೆ ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಕುನಾನ್-ಫೋಸ್‌ಪೋರಾ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕು ಸಂಘಟನೆಯೊಂದು ಪ್ರಧಾನಿ ಅವರಲ್ಲಿ ಪ್ರಕರಣದ ತನಿಖೆಯನ್ನು ಮತ್ತೆ ಆರಂಭಿಸಿಬೇಕೆಂದು ಮನವಿ ಮಾಡಿದೆ.
ಈ ಮಧ್ಯೆ ಪ್ರತ್ಯೇಕತಾವಾದಿಗಳು ಪ್ರಧಾನಿ ಅವರ ಭೇಟಿಯನ್ನು ವಿರೋಧಿಸಿ ಕರೆ ನೀಡಿದ್ದ ಪ್ರತಿಭಟನೆಯಿಂದಾಗಿ ಕಾಶ್ಮೀರ ಕಣಿವೆಯಲ್ಲಿ ಜನಜೀವನ ಮಂಗಳವಾರ ಅಸ್ತವ್ಯಸ್ತಗೊಂಡಿತು.
ಹುರಿಯತ್ ಕಾನ್ಫರೇನ್ಸ್ ಹಾಗೂ ಜೆಕೆಎಲ್‌ಎಫ್ ಸಂಘಟನೆಗಳು ನೀಡಿದ್ದ ಸಾರ್ವತ್ರಿಕ ಮುಷ್ಕರದ ಪರಿಣಾಮ ಅಂಗಡಿ-ಮುಂಗಟ್ಟುಗಳು, ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಶಾಲಾಕಾಲೇಜುಗಳು ಬಾಗಿಲು ಮುಚ್ಚಿದ್ದವು. ಪ್ರಧಾನಿ ಅವರ ಭೇಟಿಯ ಹಿನ್ನೆಲೆಯಲ್ಲಿ ಕಲ್ಪಿಸಲಾಗಿದ್ದ ಭಾರಿ ಭದ್ರತೆಯಿಂದಾಗಿ ರಸ್ತೆಯೆಲ್ಲೆಲ್ಲಾ ಬರೇ ಭದ್ರತಾ ಸಿಬ್ಬಂದಿ ಕಾಣ ಬರುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.