ADVERTISEMENT

ಪ್ರಧಾನಿ ಹುದ್ದೆ: ಮೋದಿಗೆ ಶಿವಸೇನೆ ಬೆಂಬಲವಿಲ್ಲ?

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 19:59 IST
Last Updated 19 ಜುಲೈ 2013, 19:59 IST

ನವದೆಹಲಿ (ಪಿಟಿಐ): ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಗೆ ಅಭ್ಯರ್ಥಿಯನ್ನಾಗಿ ಮಾಡುವ ಬಿಜೆಪಿ ಉತ್ಸಾಹಕ್ಕೆ ಅದರ ಮಿತ್ರಪಕ್ಷ ಶಿವಸೇನೆ ಜತೆಗೂಡುವ ಸಾಧ್ಯತೆ ಕಾಣುತ್ತಿಲ್ಲ.

`ವಿಶ್ವಾಸಾರ್ಹ ಮುಖವೊಂದು ದೇಶಕ್ಕೆ ಅಗತ್ಯವಿದೆ. ಅದಕ್ಕೆ ಸೂಕ್ತವಾಗುವ ಮುಖ ಎಲ್ಲಿಯಾದರೂ ಇದೆಯೇ? ಸ್ಪಷ್ಟವಾಗಿ ನಮಗಂತೂ ಆ ಮುಖ ಗೋಚರಿಸುತ್ತಿಲ್ಲ, ಹಾಗಿದ್ದರೂ ನಾವು ಸುಭದ್ರ ಸರ್ಕಾರ ರಚಿಸೋಣ' ಎಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಶುಕ್ರವಾರ ಇಲ್ಲಿ ನಡೆದ ಕಾರ್ಯಕ್ರಮದ ಬಳಿಕ ಹೇಳಿದರು.

ಹಾಗಿದ್ದರೆ ಎನ್‌ಡಿಎ ಮೈತ್ರಿಕೂಟದ ನೇತೃತ್ವ ವಹಿಸುವವರು ಯಾರು ಎಂಬ ಸುದ್ದಿಗಾರರ ಪ್ರಶ್ನೆಗೆ, `ನಮ್ಮಲ್ಲಿ ಸಾಕಷ್ಟು ವಿಶ್ವಾಸಾರ್ಹ ನಾಯಕರಿದ್ದಾರೆ. ಸ್ವಲ್ಪ ದಿನ ಕಾಯ್ದರೆ ಎಲ್ಲವೂ ಗೊತ್ತಾಗಲಿದೆ' ಎಂದು ಪ್ರತಿಕ್ರಿಯಿಸಿದರು.

ಬಳಿಕ ಠಾಕ್ರೆ ಅವರು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದರು.

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರನ್ನು ಪ್ರಧಾನಿ ಹುದ್ದೆ ಅಭ್ಯರ್ಥಿಯಾಗಿ ಬಿಂಬಿಸಲು ಬಿಜೆಪಿ ನಿರ್ಧರಿಸಿದ್ದು, ಇದಕ್ಕೆ ಶಿವಸೇನೆ ಅಷ್ಟೊಂದು ಉತ್ಸಾಹ ತೋರಿಸದೇ ಇರುವುದು ಮಹತ್ವ ಪಡೆದಿದೆ.

ಬೆಂಬಲವಿಲ್ಲ: ಮಮತಾ ಬ್ಯಾನರ್ಜಿ
ರಾಂಪುರ್‌ಹತ್ (ಪಶ್ಚಿಮ ಬಂಗಾಳ) (ಪಿಟಿಐ):
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ತಮ್ಮ ಪಕ್ಷ ಯಾವತ್ತೂ ಬೆಂಬಲಿಸದು ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಹೇಳಿದ್ದಾರೆ.

`ನರೇಂದ್ರ ಮೋದಿ ಅವರನ್ನು ಬೆಂಬಲಿಸುವುದಿಲ್ಲ. ಭವಿಷ್ಯದಲ್ಲೂ  ಮೋದಿಗೆ ಬೆಂಬಲಿಸುವುದಿಲ್ಲ'ಎಂದು ಪಂಚಾಯತ್ ಚುನಾವಣಾ ರ‌್ಯಾಲಿಯಲ್ಲಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೋಮುವಾದಿ ಪಕ್ಷ ಪ್ರತಿನಿಧಿಸುವ ಮೋದಿ: ಅಣ್ಣಾ ಹಜಾರೆ
ನವದೆಹಲಿ:
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕೋಮುವಾದಿ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳ್ದ್ದಿದಾರೆ.

`ನಿರ್ದಿಷ್ಟ ಸಮುದಾಯವೊಂದರ ಪರ ಸಹಾನುಭೂತಿ ಹೊಂದಿರುವ ಪಕ್ಷಕ್ಕೆ ಮೋದಿ ಸೇರಿದ್ದಾರೆ. ಆ ಪಕ್ಷ ಇನ್ನೊಂದು ನಿರ್ದಿಷ್ಟ ಸಮುದಾಯವನ್ನು ವಿರೋಧಿಸುವಂಥದು.

ನನಗೆ ತಿಳಿದಿರುವ ಮಟ್ಟಿಗೆ ಗೋಧ್ರಾ ದುರಂತವನ್ನು ಮೋದಿ ಈವರೆಗೆ ಖಂಡಿಸಿಲ್ಲ. ಇಂಥ ವ್ಯಕ್ತಿ ಕೋಮುವಾದಿ ಅಲ್ಲವೆಂದು ನಾನು ಹೇಗೆ ಹೇಳಲಿ?' ಎಂದು ಶುಕ್ರವಾರ ಅವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಭಾರತದ ಸಂವಿಧಾನ ಜಾತ್ಯತೀತವಾಗಿದ್ದು, ಪ್ರತಿಯೊಂದು ಪಕ್ಷವೂ ಅದನ್ನು ಪಾಲಿಸಬೇಕು. ಆ ತತ್ವಗಳನ್ನು ಪಾಲಿಸದ ಪಕ್ಷ ಬಹುಮತ ಗಳಿಸುವುದಿಲ್ಲ ಎಂದು ಅಣ್ಣಾ ಹಜಾರೆ ಭವಿಷ್ಯ ನುಡಿದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸುವುದಿಲ್ಲ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.