ADVERTISEMENT

ಪ್ರಾಧ್ಯಾಪಕ ಸೇರಿ ಐವರು ಉಗ್ರರ ಹತ್ಯೆ

ಹತರಾದ ಉಗ್ರರಲ್ಲಿ ಹಿಜ್ಬುಲ್‌ ಕಮಾಂಡರ್‌ * ಐವರು ನಾಗರಿಕರು ಸಾವು

ಪಿಟಿಐ
Published 6 ಮೇ 2018, 19:30 IST
Last Updated 6 ಮೇ 2018, 19:30 IST
ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಭದ್ರತಾ ಪಡೆ ಸಿಬ್ಬಂದಿ
ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಭದ್ರತಾ ಪಡೆ ಸಿಬ್ಬಂದಿ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ  ಭದ್ರತಾ ಪಡೆಗಳು ಭಾನುವಾರ ಬೆಳಗಿನ ಜಾವ ನಡೆಸಿದ ಕಾರ್ಯಾಚರಣೆಯಲ್ಲಿ ಕಾಶ್ಮೀರ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸೇರಿ ಐವರು ಹಿಜ್ಬುಲ್‌ ಮುಜಾಹಿದೀನ್‌ ಉಗ್ರರನ್ನು ಕೊಂದು ಹಾಕಿವೆ.

ಕಾರ್ಯಾಚರಣೆ ಸ್ಥಳದಲ್ಲಿ ಭದ್ರತಾ ಪಡೆಗಳು ಮತ್ತು ಕಲ್ಲು ತೂರಾಟ ನಡೆಸಿದ ಪ್ರತಿಭಟನಾಕಾರರ ಮಧ್ಯೆ ನಡೆದ ಚಕಮಕಿಯಲ್ಲಿ ಐವರು ನಾಗರಿಕರು ಮೃತಪಟ್ಟಿದ್ದಾರೆ.

ಬಡಿಗಾಮ್‌ ಗ್ರಾಮದಲ್ಲಿ ಉಗ್ರರು ಅಡಗಿದ ಬಗ್ಗೆ ಮಾಹಿತಿ ಪಡೆದ ಯೋಧರು ಶನಿವಾರ ರಾತ್ರಿಯೇ ಅಡಗುತಾಣ ಸುತ್ತುವರಿದಿದ್ದರು..

ADVERTISEMENT

ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಎಲ್ಲ ಐವರು ಉಗ್ರರನ್ನೂ ಹೊಡೆದು ಉರುಳಿಸಲಾಗಿದೆ.

ಹಿಜ್ಬುಲ್‌ ಕಮಾಂಡರ್‌ ಸದ್ದಾಂ ಪದ್ದರ್‌ ಮತ್ತು ಹೊಸದಾಗಿ ಉಗ್ರ ಸಂಘಟನೆ ಸೇರಿದ್ದ ಕಾಶ್ಮೀರ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮೊಹಮ್ಮದ್‌ ರಫಿ ಭಟ್‌ ಹತರಾದ ಉಗ್ರರಲ್ಲಿ ಸೇರಿದ್ದಾರೆ.ಶುಕ್ರವಾರ ಮಧ್ಯಾಹ್ನದ ನಂತರ ನಾಪತ್ತೆಯಾಗಿದ್ದ ಭಟ್‌ ಅಂದೇ ನೇರವಾಗಿ ಉಗ್ರ ಸಂಘಟನೆ ಸೇರಿದ್ದ ಎಂದು ತಿಳಿದು ಬಂದಿದೆ.

ಹತರಾದ ಎಲ್ಲ ಐವರು ಉಗ್ರರೂ ಸ್ಥಳೀಯರು ಎಂದು ಪೊಲೀಸರು ತಿಳಿಸಿದ್ದಾರೆ. ಉಗ್ರರ ಜತೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸ್‌ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಗಾಯ ಗೊಂಡಿದ್ದಾರೆ. ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಬಂದೂಕು, ಮದ್ದುಗುಂಡು ಹಾಗೂ ಇತರ ಶಸ್ತ್ರಾಸ್ತ್ರ ದೊರೆತಿವೆ.  ಛಟ್ಟಾಬಾಲ್‌ನಲ್ಲಿ ಶನಿವಾರ ಮೂವರು ಉಗ್ರರನ್ನು ಹೊಡೆದು ಉರುಳಿಸಿದ 24 ಗಂಟೆಗಳಲ್ಲಿ ಮತ್ತೆ ಐವರು ಉಗ್ರರನ್ನು ಸದೆ ಬಡಿಯಲಾಗಿದೆ. ಇದು ಭದ್ರತಾ ಪಡೆಗಳಿಗೆ ದೊರೆತ ಬಹು ದೊಡ್ಡ ಯಶಸ್ಸು ಎಂದು ಬಣ್ಣಿಸಲಾಗಿದೆ.

36 ತಾಸಿನ ಉಗ್ರ!

ಶುಕ್ರವಾರ ಮಧ್ಯಾಹ್ನ ಉಗ್ರ ಸಂಘಟನೆಗೆ ಸೇರಿದ್ದ 33 ವರ್ಷದ ಮೊಹಮ್ಮದ್‌ ರಫಿ ಭಟ್‌ ಕೇವಲ 36 ಗಂಟೆಯಲ್ಲಿ ಉಗ್ರನ ಹಣೆಪಟ್ಟಿ ಕಟ್ಟಿಕೊಂಡು ಹೆಣವಾಗಿದ್ದಾನೆ.

ತಮ್ಮ ಮಗ ಕಾಣೆಯಾದ ಬಗ್ಗೆ ರಫಿ ಪೋಷಕರು ಶನಿವಾರ ಬೆಳಿಗ್ಗೆ ವಿಶ್ವವಿದ್ಯಾಲಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಪ್ರಾಧ್ಯಾಪಕನ ಪತ್ತೆಗೆ ಒತ್ತಾಯಿಸಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಪ್ರಾಧ್ಯಾಪಕನನ್ನು ಹುಡುಕಿ ಕೊಡುವಂತೆ ವಿಶ್ವವಿದ್ಯಾಲಯದ ಕುಲಪತಿ, ಪೊಲೀಸ್‌ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

ಕೊನೆಯ ಕರೆ:  ದಕ್ಷಿಣ ಕಾಶ್ಮೀರದ ಗಂದರ್‌ಬಾಲ್‌ ವಲಯದ ಚುಂಡಾನಾ ಗ್ರಾಮದಲ್ಲಿ ವಾಸವಾಗಿರುವ ತಾಯಿಯೊಂದಿಗೆ ರಫಿ ಶುಕ್ರವಾರ ದೂರವಾಣಿಯಲ್ಲಿ ಮಾತನಾಡಿದ್ದ.  ಶನಿವಾರ ರಾತ್ರಿ ಭದ್ರತಾ ಪಡೆಗಳು ಸುತ್ತುವರಿದಾಗ ತನ್ನ ತಂದೆಗೆ  ಕರೆ ಮಾಡಿದ್ದ ಆತ, ‘ನನ್ನಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿ. ಇದು ನನ್ನ ಕೊನೆಯ ಕರೆ. ನಾನು ಅಲ್ಲಾಹುನ ಬಳಿ ಹೋಗುತ್ತಿದ್ದೇನೆ’ ಎಂದು ಕರೆ ಕಡಿತಗೊಳಿಸಿದ್ದ.

ಈ ಕರೆಯನ್ನು ಆಧರಿಸಿ ಭದ್ರತಾ ಸಿಬ್ಬಂದಿ ಚುಂಡಾನಾ ಗ್ರಾಮದಲ್ಲಿ ಭಟ್‌ ತಂದೆ, ತಾಯಿ, ಸಹೋದರಿಯರು ಮತ್ತು ಪತ್ನಿಯನ್ನು ಕಾರ್ಯಾಚರಣೆ ಸ್ಥಳಕ್ಕೆ ಕರೆತರುತ್ತಿದ್ದರು. ಅವರ ಮೂಲಕ ಶರಣಾಗುವಂತೆ ಪ್ರಾಧ್ಯಾಪಕನ ಮನವೊಲಿಸುವ ಯೋಜನೆ ಅವರದ್ದಾಗಿತ್ತು. ಆದರೆ, ಅವರು ಬರುವ ಮೊದಲೇ ರಫಿ ಭಟ್‌ ಗುಂಡಿಗೆ ಬಲಿಯಾಗಿದ್ದ.ಮಾರ್ಗ ಮಧ್ಯದಲ್ಲಿಯೇ ಈ ಸುದ್ದಿ ತಿಳಿದ ಕುಟುಂಬ ಸದಸ್ಯರು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಲು ಸ್ವಗ್ರಾಮಕ್ಕೆ ಮರಳಿದರು.

18ನೇ ವಯಸ್ಸಿನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಸುಳುವ ಯತ್ನದಲ್ಲಿದ್ದ ರಫಿಯನ್ನು ಪೊಲೀಸರು ಹಿಡಿದು ಪೋಷಕರ ವಶಕ್ಕೆ ಒಪ್ಪಿಸಿದ್ದರು.

* ನಾಳೆ ನಡೆಯಬೇಕಾಗಿದ್ದ ಕಾಶ್ಮೀರ ವಿಶ್ವವಿದ್ಯಾಲಯ ಪರೀಕ್ಷೆ ಮುಂದಕ್ಕೆ, 2 ದಿನ ಶಾಲೆಗೆ ರಜೆ ಘೋಷಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.