
ನವದೆಹಲಿ (ಪಿಟಿಐ): ಪ್ರಾಮಾಣಿಕತೆ ಮತ್ತು ವೃತ್ತಿಪರತೆಯಿಂದ ಸೇವೆ ಸಲ್ಲಿಸುತ್ತಿರುವ ಏರ್ ಇಂಡಿಯಾ ಭದ್ರತಾ ವಿಭಾಗದ ನೌಕರ ಸುಭಾಷ್‌ಚಂದ್ರ ಅವರಿಗೆ ಸೇವಾ ಹಿರಿತನ ಇಲ್ಲದಿದ್ದರೂ ಅಧಿಕಾರಿ ಹುದ್ದೆಗೆ ಬಡ್ತಿ ನೀಡಲಾಗಿದೆ.
ಪ್ರಯಾಣಿಕರು ವಿಮಾನದಲ್ಲಿ ಅಥವಾ ವಿಮಾನ ನಿಲ್ದಾಣದಲ್ಲಿ ಬಿಟ್ಟುಹೋಗಿದ್ದ ಹಣ, ಬೆಲೆ ಬಾಳುವ ವಸ್ತುಗಳನ್ನು ವಾಪಸ್ ಮಾಡುವ ಮೂಲಕ ಸುಭಾಷ್‌ಚಂದ್ರ ಅವರು ಏರ್ ಇಂಡಿಯಾ ಸಂಸ್ಥೆಗೆ ಒಳ್ಳೆಯ ಹೆಸರು ತಂದಿದ್ದಾರೆ.
ಒಮ್ಮೆ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಐದು ಲಕ್ಷ ವಿದೇಶಿ ಕರೆನ್ಸಿಯನ್ನು ಮತ್ತು ಚಿನ್ನದ ಆಭರಣವನ್ನು ವಾಪಸ್ ಮಾಡಿದ್ದಾರೆ. ಇವರ ಪ್ರಾಮಾಣಿಕತೆಯನ್ನು ಮೆಚ್ಚಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶ್ವನಿ ಲೋಹಾನಿ ಅವರು ಸೇವಾ ಹಿರಿತನ ಇಲ್ಲದಿದ್ದರೂ ಅಧಿಕಾರಿ ಹುದ್ದೆಗೆ ಬಡ್ತಿ ನೀಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯಂದು ಭದ್ರತಾ ವಿಭಾಗದ ನಿರ್ದೇಶಕ ಐಪಿಎಸ್ ಅಧಿಕಾರಿ ಅಲೋಕ್ ಸಿಂಗ್ ಅವರು ಸುಭಾಷ್‌ಚಂದ್ರ ಅವರಿಗೆ ಅಧಿಕಾರಿ ಹುದ್ದೆಯ ಬಡ್ತಿ ಆದೇಶವನ್ನು ನೀಡಿದರು.
ವಿಜ್ಞಾನ ಪದವೀಧರರಾಗಿರುವ ಸುಭಾಷ್‌ಚಂದ್ರ ಅವರು ವಿಮಾನ ಯಾನಕ್ಕೆ ಸಂಬಂಧಿಸಿದ ಅನೇಕ ಭದ್ರತಾ ಕೋರ್ಸ್‌ಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.