ADVERTISEMENT

ಬಜರಂಗ ದಳ ಶಸ್ತ್ರಾಸ್ತ್ರ ತರಬೇತಿ ರಾಜ್ಯಪಾಲ ನಾಯ್ಕ್‌ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST

ಅಯೋಧ್ಯೆ/ಅಲೀಗಡ (ಪಿಟಿಐ): ಬಜರಂಗ ದಳವು ಅಯೋಧ್ಯೆಯಲ್ಲಿ  ತನ್ನ ಕಾರ್ಯಕರ್ತರಿಗೆ ‘ಆತ್ಮರಕ್ಷಣೆ’ಗಾಗಿ ಶಸ್ತ್ರಾಸ್ತ್ರ ಬಳಕೆ ಕಾರ್ಯಾಗಾರ ನಡೆಸಿರುವುದನ್ನು ಉತ್ತರ ಪ್ರದೇಶ ರಾಜ್ಯಪಾಲ ರಾಮ ನಾಯ್ಕ್‌ ಸಮರ್ಥಿಸಿಕೊಂಡಿದ್ದಾರೆ.

‘ಈ ಶಸ್ತ್ರಾಸ್ತ್ರ ಬಳಕೆ ತರಬೇತಿಯ ಉದ್ದೇಶ ಆತ್ಮರಕ್ಷಣೆ. ಇಂತಹ ತರಬೇತಿಗೆ ಯಾವುದೇ ಆಕ್ಷೇಪ ವ್ಯಕ್ತವಾಗುವುದು ಸಾಧ್ಯವಿಲ್ಲ. ತರಬೇತಿಯ ಹಿಂದೆ ಇರುವ ಉದ್ದೇಶ ಏನು ಎಂಬುದಷ್ಟೇ ಮುಖ್ಯ’ ಎಂದು ರಾಮ ನಾಯ್ಕ್‌ ಹೇಳಿದ್ದಾರೆ.

ಬಜರಂಗ ದಳ ನಡೆಸುತ್ತಿರುವ ಕೆಲವು ಶಾಲೆಗಳಲ್ಲಿ ನಡೆಸಲಾದ ಶಿಬಿರಗಳಲ್ಲಿ ಕಾರ್ಯಕರ್ತರು ಬಂದೂಕು, ಖಡ್ಗ ಮತ್ತು ಲಾಠಿ ಬಳಕೆಯ ತರಬೇತಿ ಪಡೆಯುತ್ತಿರುವ ಫೋಟೊಗಳು ಸಾಮಾಜಿಕ ಜಾಲ ತಾಣಗಳು ಮತ್ತು ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಆಗಿವೆ.

ಶಸ್ತ್ರಾಸ್ತ್ರ ಬಳಕೆ ತರಬೇತಿ ಬಗ್ಗೆ ವ್ಯಕ್ತವಾದ ಆತಂಕ ಪರಿಹರಿಸಲು ಯತ್ನಿಸಿರುವ ರಾಮ ನಾಯ್ಕ್‌ ಅವರು, ‘ತಮ್ಮನ್ನು ರಕ್ಷಿಸಿಕೊಳ್ಳಲಾಗದವರು ದೇಶವನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಆತ್ಮರಕ್ಷಣೆಯ ಉದ್ದೇಶಕ್ಕಾಗಿ ಶಸ್ತ್ರಾಸ್ತ್ರ ತರಬೇತಿ ನೀಡುವುದು ತಪ್ಪಲ್ಲ’ ಎಂದು ಹೇಳಿದ್ದಾರೆ.

ಹಿಂದೂ  ಸಮುದಾಯ ಎದುರಿಸುತ್ತಿರುವ ಬೆದರಿಕೆಯಿಂದ ರಕ್ಷಣೆ ಪಡೆಯಲು ಪೊಲೀಸರು ಅಥವಾ ರಾಜಕಾರಣಿಗಳನ್ನು ಅವಲಂಬಿಸುವಂತಿಲ್ಲ. ಹಾಗಾಗಿ ಶಸ್ತ್ರಾಸ್ತ್ರ ಬಳಕೆ ತರಬೇತಿ ಅತ್ಯಗತ್ಯ ಎಂದು ಬಜರಂಗ ದಳ ಹೇಳಿದೆ.

ಅಯೋಧ್ಯೆಯಲ್ಲಿ ಈಗಾಗಲೇ ನಡೆಸಲಾಗಿರುವ ವಾರ್ಷಿಕ ‘ಆತ್ಮರಕ್ಷಣೆ’ ತರಬೇತಿ ಶಿಬಿರವನ್ನು ಸುಲ್ತಾನ್‌ಪುರ, ಗೋರಖ್‌ಪುರ, ಫಿಲಿಭಿತ್‌, ನೋಯ್ಡಾ ಮತ್ತು ಫತೇಪುರಗಳಲ್ಲಿ ಕೂಡ ನಡೆಸಲು ಉದ್ದೇಶಿಸಲಾಗಿದೆ. ಬಜರಂಗ ದಳದ ವಿರುದ್ಧ ಗಲಭೆ ನಡೆಸಿದ ಮತ್ತು ಹಿಂಸಾಚಾರ ನಡೆಸಿದ ಆರೋಪಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.