ADVERTISEMENT

ಬದರಿನಾಥ, ಹೇಮಕುಂಡ ಸಾಹಿಬ್‌ ಯಾತ್ರೆಗೆ ಮತ್ತೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2015, 9:50 IST
Last Updated 29 ಜೂನ್ 2015, 9:50 IST

ಗೋಪೇಶ್ವರ್‌/ಉತ್ತರಾಖಂಡ (ಪಿಟಿಐ): ಹಿಮಾಲಯ ಪರ್ವತ ಪ್ರದೇಶದಲ್ಲಿರುವ ಯಾತ್ರಾ ಕ್ಷೇತ್ರಗಳಾದ  ಬದರಿನಾಥ ಮತ್ತು ಚಮೋಲಿ ಜಿಲ್ಲೆಯಲ್ಲಿರುವ ಸಿಖ್ಖರ ಪವಿತ್ರ ಹೇಮಕುಂಡ್‌ ಸಾಹಿಬ್‌ ಕ್ಷೇತ್ರ ವ್ಯಾಪ್ತಿಯಲ್ಲಿ ಭಾನುವಾರವೂ ಮುಂದುವರಿದ ಕುಂಭದ್ರೋಣ ಮಳೆಯಿಂದಾಗಿ ನಾಲ್ಕನೇ ದಿನವೂ ಯಾತ್ರಾರ್ಥಿಗಳಿಗೆ ಕ್ಷೇತ್ರ ದರ್ಶನ ಸಾಧ್ಯವಾಗಲಿಲ್ಲ.

ಈ ಮಧ್ಯೆ, ಮಾರ್ಗಮಧ್ಯೆ ಸಿಕ್ಕಿಹಾಕಿಕೊಂಡ ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸುವ ರಕ್ಷಣಾ ಕಾರ್ಯ ಮಳೆಯ ನಡುವೆಯೂ ನಿರಂತರವಾಗಿ ಸಾಗಿತ್ತು.

ಭಿಯೂಂದರ್‌ ಗ್ರಾಮದಲ್ಲಿನ ಸೇತುವೆ ಮತ್ತು ಟ್ರಕ್‌ ಮಾರ್ಗವೂ ಮಳೆಗೆ ಕೊಚ್ಚಿಹೋದ ಪರಿಣಾಮ ಹೇಮಕುಂಡ್‌ ಸಾಹಿಬ್‌ ಕ್ಷೇತ್ರ ಭೇಟಿಯನ್ನು ರದ್ದುಗೊಳಿಸಲಾಯಿತು. ಪರ್ಯಾಯ ಮಾರ್ಗದ ನಿರ್ಮಾಣ ಕಾರ್ಯವನ್ನು ತಕ್ಷಣವೇ ಆರಂಭಿಸಲಾಗಿದೆ.

ಹೇಮಕುಂಡ್‌ ಸಾಹಿಬ್‌ಗೆ ತೆರಳುತ್ತಿದ್ದ ಯಾತ್ರಾರ್ಥಿಗಳು ಗಂಗಾರಿಯಾದಲ್ಲಿ ಮಳೆಗೆ ಸಿಲುಕಿಕೊಂಡಿದ್ದರೆ, ಬದರಿನಾಥ ಯಾತ್ರಾರ್ಥಿಗಳನ್ನು ಸ್ಥಳಾಂತರಿಸುವ ಕಾರ್ಯ ನಡೆದಿದೆ. ಮೂರು ದಿನಗಳಿಂದ ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಚಮೋಲಿ ಜಿಲ್ಲಾಧಿಕಾರಿ ಅಶೋಕ್‌ ಕುಮಾರ್‌ ಅವರು ಸ್ಥಳಾಂತರ ಕಾರ್ಯಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ.

‘ಬದರಿನಾಥದಲ್ಲಿ ಸಿಕ್ಕಿಹಾಕಿಕೊಂಡಿರುವ ಯಾತ್ರಾರ್ಥಿಗಳನ್ನು ಬಿನಾಕುಲಿಗೂ ಲಂಬಾಗಡ್‌ನಿಂದ ಜೋಷಿ ಮಠಕ್ಕೂ ವಾಹನಗಳ ಮೂಲಕ ರವಾನಿಸಲಾಗುತ್ತಿದೆ’ ಎಂದು ಚಮೋಲಿ ವಿಪತ್ತು ನಿರ್ವಹಣಾ ಅಧಿಕಾರಿ ನಂದ ಕಿಶೋರ್‌ ತಿಳಿಸಿದರು. ಇದುವರೆಗೂ ಸಾವಿರಾರು ಯಾತ್ರಾರ್ಥಿಗಳನ್ನು ಭಾನುವಾರ ಜೋಷಿಮಠಕ್ಕೆ ಸ್ಥಳಾಂತರಿಸಲಾಗಿದೆ. ಗಂಗಾರಿಯಾದಿಂದ ಎರಡು ಹೆಲಿಕಾಪ್ಟರ್‌ಗಳ ಮೂಲಕ 350 ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲಾಗಿದೆ ಎಂದು  ಮಾಹಿತಿ ನೀಡಿದರು.

ಗಂಗಾರಿಯಾದಲ್ಲಿ ಮಳೆಗೆ ಸಿಕ್ಕಿಹಾಕಿಕೊಂಡಿದ್ದ ಬಹುತೇಕ ಸಿಖ್‌ ಯಾತ್ರಾರ್ಥಿಗಳು ಸುರಕ್ಷಿತವಾಗಿ ತಮ್ಮೂರು ತಲುಪಿದ್ದಾರೆ ಎಂದು ಹೇಮಕುಂಡ ಗುರುದ್ವಾರ ಪ್ರಬಂಧಕ ಸಮಿತಿಯ ಮುಖ್ಯಸ್ಥ ಸೇವಾ ಸಿಂಗ್‌ ತಿಳಿಸಿದರು.

ಬುಧವಾರ ಮತ್ತು ಗುರುವಾರ ಸುರಿದ ಬಾರಿ ಮಳೆಗೆ ಭೂಕುಸಿತವಾದ ಪರಿಣಾಮ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಹಲವೆಡೆ ಬಂದ್‌ ಆಗಿ ಯಾತ್ರಾರ್ಥಿಗಳು ಮಾರ್ಗಮಧ್ಯೆ ಉಳಿದುಹೋಗಿದ್ದರು. ಈ ನಡುವೆ ಹೇಮಕುಂಡ ಸಾಹಿಬ್‌ಗೆ ಸಾಗುವ ಮರದ ಸೇತುವೆ ಮಳೆಗೆ ಕೊಚ್ಚಿಹೋಗಿತ್ತು. ಹಗ್ಗದ ಸೇತುವೆ ಮೂಲಕ ರಕ್ಷಣೆ: ಹೆದ್ದಾರಿ ಮತ್ತು ಭಿಯೂಂದರ್‌ ಗ್ರಾಮದಲ್ಲಿ ಪುಷ್ಪಾವತಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಈ ಸೇತುವೆ ಇಲ್ಲದೆ 11 ಸಾವಿರಕ್ಕೂ ಅಧಿಕ ಯಾತ್ರಾರ್ಥಿಗಳು ತೊಂದರೆಗೀಡಾಗಿದ್ದರು. 

ಸೇನಾ ಪಡೆ ಮತ್ತು ಐಟಿಬಿಪಿ ಸಿಬ್ಬಂದಿ ಹಗ್ಗದಿಂದ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಡುವ  ಮೂಲಕ ಜನರಿಗೆ ಪುಷ್ಪಾವತಿ ನದಿ ದಾಟಲು ನೆರವಾದರು. ‍ಪ್ರತಿಕೂಲ ಹವಾಮಾನದ ನಡುವೆಯೂ  ಯಾತ್ರಾರ್ಥಿಗಳು  ನಿರಾಶರಾಗದೆ ಚಮೋಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ತಂಗಿ ಯಾತ್ರೆ ಮುಂದುವರಿಸುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಹೇಮಕುಂಡ ಸಾಹಿಬ್‌ ಮಾರ್ಗದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಲು ಇನ್ನೂ 2–3 ದಿನ ಕಾಯಬೇಕಾಗುತ್ತದೆ ಎಂದು ಸೇವಾ ಸಿಂಗ್‌ ಸುದ್ದಿಸಂಸ್ಥೆಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT