ADVERTISEMENT

ಬರ: ರೂ 526 ಕೋಟಿ ನೆರವು

​ಪ್ರಜಾವಾಣಿ ವಾರ್ತೆ
Published 10 ಜನವರಿ 2013, 20:19 IST
Last Updated 10 ಜನವರಿ 2013, 20:19 IST
ಬರ: ರೂ 526 ಕೋಟಿ ನೆರವು
ಬರ: ರೂ 526 ಕೋಟಿ ನೆರವು   

ನವದೆಹಲಿ : ಕಳೆದ ವರ್ಷ ಬರದ ಸಮಸ್ಯೆ ಎದುರಿಸಿದ್ದ ಕರ್ನಾಟಕ ಮತ್ತು ಮಹಾರಾಷ್ಟ್ರಗಳಿಗೆರೂ 1,304 ಕೋಟಿ ನೆರವು ನೀಡಲು ಕೃಷಿ ಸಚಿವ ಶರದ್ ಪವಾರ್ ನೇತೃತ್ವದ ಉನ್ನತಾಧಿಕಾರ ಸಮಿತಿ ಅನುಮತಿ ನೀಡಿದೆ.

ನೈರುತ್ಯ ಮುಂಗಾರು ವಿಫಲವಾಗಿದ್ದರಿಂದ 2012ರಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ತೀವ್ರ ಬರಕ್ಕೆ ಸಿಲುಕಿದ್ದವು. ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿಯಿಂದ (ಎನ್‌ಡಿಆರ್‌ಎಫ್) ಹಣಕಾಸು ನೆರವು ನೀಡುವಂತೆ ಮನವಿ ಸಲ್ಲಿಸಿದ್ದವು.

ನೈಸರ್ಗಿಕ ವಿಕೋಪದಿಂದ ತೊಂದರೆಗೊಳಗಾದ ರಾಜ್ಯಗಳಿಗೆ ಕೇಂದ್ರದ ನೆರವು ಕಲ್ಪಿಸುವ ಉನ್ನತಾಧಿಕಾರ ಸಮಿತಿ ಕರ್ನಾಟಕಕ್ಕೆರೂ 526.06 ಕೋಟಿ ಮತ್ತು ಮಹಾರಾಷ್ಟ್ರಕ್ಕೆರೂ 778.09 ಕೋಟಿ ನೀಡಲು ನಿರ್ಧರಿಸಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ನಿಧಿಯನ್ನು ಬೀಜಗಳಿಗೆ ಸಬ್ಸಿಡಿ, ನೀರಾವರಿ ಸೌಲಭ್ಯ ಹೆಚ್ಚಳ ಮತ್ತು ಮೇವು ಪೂರೈಕೆಗಾಗಿ ಬಳಸಲಾಗುವುದು.

ಕರ್ನಾಟಕವು 26 ಜಿಲ್ಲೆಗಳ 142 ತಾಲ್ಲೂಕುಗಳಲ್ಲಿ ಬರ ಘೋಷಿಸಿದ್ದರೆ, ಮಹಾರಾಷ್ಟ್ರ 16 ಜಿಲ್ಲೆಗಳ 125 ತಾಲ್ಲೂಕುಗಳಲ್ಲಿ  ಬರ ಬಂದಿದೆ ಎಂದು ಹೇಳಿತ್ತು.

ಕೃಷಿ ಕಾರ್ಯದರ್ಶಿ ನೇತೃತ್ವದ ಅಂತರ ಸಚಿವಾಲಯ ಸಮಿತಿ ಸಲ್ಲಿಸಿದ ಶಿಫಾರಸಿನ ಮೇರೆಗೆ ಉನ್ನತಾಧಿಕಾರ ಸಮಿತಿ ಈ ರಾಜ್ಯಗಳಿಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿತು.

ಶರದ್ ಪವಾರ್ ಹೊರತಾಗಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಹಣಕಾಸು ಸಚಿವ ಪಿ. ಚಿದಂಬರಂ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಉನ್ನತಾಧಿಕಾರ ಸಮಿತಿಯ ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.