ನವದೆಹಲಿ (ಪಿಟಿಐ): ಕಪ್ಪುಹಣದ ವಿರುದ್ಧ ಯೋಗಗುರು ಬಾಬಾ ರಾಮದೇವ್ ಅವರು ಜೂನ್ ತಿಂಗಳಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹದ ವೇಳೆ ದೆಹಲಿ ಪೊಲೀಸರ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದ ರಾಜ್ ಬಾಲಾ ಎಂಬ ಮಹಿಳೆ ಸೋಮವಾರ ಮೃತರಾಗಿದ್ದಾರೆ.
ಪೊಲೀಸ್ ಕಾರ್ಯಾಚರಣೆಯಲ್ಲಿ ಬೆನ್ನುಹುರಿಗೆ ಏಟು ತಗುಲಿ ಅಸ್ವಸ್ಥರಾಗಿದ್ದ ಗುಡಗಾಂವ್ ನಿವಾಸಿ ರಾಜ್ ಬಾಲಾ (51) ಅವರನ್ನು ಜೂನ್ 4 ರಂದು ಚಿಕಿತ್ಸೆಗಾಗಿ ಜಿ.ಬಿ ಪಂತ್ ಆಸ್ಪತ್ರೆಯ ನರ ಶಸ್ತ್ರಚಿಕಿತ್ಸೆ ವಿಭಾಗದ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು.
ದಾಖಲಾದ ದಿನದಿಂದಲೂ ಅವರ ಪರಿಸ್ಥಿತಿಯು ಚಿಂತಾಜನಕವಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ರಾಜ್ ಬಾಲಾ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ (ವೆಂಟಿಲೆಟರ್) ಮಾಡಲಾಗಿತ್ತು. ನರಗಳ ಮೇಲಾದ ಗಾಯದ ಪರಿಣಾಮದಿಂದಾಗಿ ಅವರು ಪಾರ್ಶ್ವವಾಯುವಿಗೂ ತುತ್ತಾಗಿದ್ದರು.
ರಾಜ್ ಬಾಲಾ ಸಾವಿನ ಸುದ್ದಿಗೆ ಪ್ರತಿಕ್ರಿಯಿಸಿದ ಬಾಬಾ ರಾಮದೇವ್ ಅವರು `ಭ್ರಷ್ಟಾಚಾರದ ವಿರುದ್ದ ಕೈಗೊಂಡ ಚಳುವಳಿ ಹಾಗೂ ಇಡೀ ಸಂಘಟನೆಗೆ ಇದೊಂದು ತುಂಬಲಾರದ ನಷ್ಟ~ ಎಂದು ಹೇಳಿದರು.
`ಇದೊಂದು ಸರ್ವಶ್ರೇಷ್ಠ ಬಲಿದಾನ. ಅವರ ಬಲಿದಾನವು ನಿಷ್ಪ್ರಯೋಜಕವಾಗಲಾರದು. ಅವರ ಲಕ್ಷಾಂತರ ಸಹೋದರ, ಸಹೋದರಿಯರು ನಿರಂತರವಾಗಿ ಭ್ರಷ್ಟಾಚಾರದ ವಿರುದ್ದದ ಹೋರಾಟವನ್ನು ಮುಂದುವರಿಸಲಿದ್ದಾರೆ~ ರಾಮ ದೇವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರೀಕರು ಸೇರಿದಂತೆ ಸಾವಿರಾರು ಅಮಾಯಕ ಜನರು ಗಾಯಗೊಂಡ `ಸಂವಿಧಾನ ವಿರೋಧಿ ಪೊಲೀಸ್ ಕಾರ್ಯಾಚರಣೆ~ ಕುರಿತು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಕೇಂದ್ರ ಗೃಹ ಸಚಿವಾಲಯ, ದೆಹಲಿ ಸರ್ಕಾರ ಹಾಗೂ ದೆಹಲಿ ಪೊಲೀಸರಿಗೆ ಈ ಕುರಿತು ವರದಿ ನೀಡುವಂತೆ ಜೂನ್ 6ರಂದು ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.