ADVERTISEMENT

ಬಾಲಕಿ ದೇಹದ ಮೇಲೆ 86 ಗಾಯಗಳು...

ಪಿಟಿಐ
Published 15 ಏಪ್ರಿಲ್ 2018, 19:30 IST
Last Updated 15 ಏಪ್ರಿಲ್ 2018, 19:30 IST
ಬಾಲಕಿ ದೇಹದ ಮೇಲೆ 86 ಗಾಯಗಳು...
ಬಾಲಕಿ ದೇಹದ ಮೇಲೆ 86 ಗಾಯಗಳು...   

ಸೂರತ್/ಮುಂಬೈ : ಸೂರತ್ ಅತ್ಯಾಚಾರ ಸಂತ್ರಸ್ತ ಬಾಲಕಿಯ ದೇಹದ ಮೇಲೆ 86 ಗಾಯಗಳಿದ್ದವು ಎಂಬ ಮಾಹಿತಿಯನ್ನು ಶವಪರೀಕ್ಷೆಯ ವರದಿ ಬಹಿರಂಗಪಡಿಸಿದೆ.

‘ಬಾಲಕಿಯನ್ನು ಕೊಲೆ ಮಾಡುವುದಕ್ಕೂ ಮೊದಲು ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ಆರೋಪಿಗಳು ಆಕೆಯನ್ನು ಸುಮಾರು ಏಳು ದಿನ ಒತ್ತೆ ಇರಿಸಿಕೊಂಡಿರುವ ಸಾಧ್ಯತೆ ಇದೆ. ಅಷ್ಟೂ ದಿನ ಆಕೆಯ ಮೇಲೆ ಹಲ್ಲೆ ಮತ್ತು ಅತ್ಯಾಚಾರಗಳು ನಡೆದಿವೆ. ಬಾಲಕಿಯ ಮರ್ಮಾಂಗದಲ್ಲೂ ತೀವ್ರವಾದ ಗಾಯಗಳಾಗಿವೆ’ ಎಂದು ಸೂರತ್ ಪೊಲೀಸ್‌ ಆಯುಕ್ತ ಸತೀಶ್‌ ಶರ್ಮಾ ಮಾಹಿತಿ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಸ್ಕೊ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಸಂತ್ರಸ್ತೆಯ ಚಿತ್ರ ಪ್ರಕಟಿಸಿದ ಪೊಲೀಸರು

ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ಸ್ಥಳೀಯ ಪತ್ರಿಕೆಗಳಲ್ಲಿ ಪೊಲೀಸರೇ ಸಂತ್ರಸ್ತ ಬಾಲಕಿಯ ಚಿತ್ರವನ್ನು ಪ್ರಕಟಿಸಿದ್ದಾರೆ. ಆದರೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಸಂತ್ರಸ್ತರ ಯಾವುದೇ ವೈಯಕ್ತಿಕ ಮಾಹಿತಿ ಮತ್ತು ಚಿತ್ರ ಬಹಿರಂಗಪಡಿಸುವುದನ್ನು ಪೋಸ್ಕೊ ಕಾಯ್ದೆ ನಿಷೇಧಿಸುತ್ತದೆ. ಹೀಗಾಗಿ ಪೊಲೀಸರು ಬಾಲಕಿಯ ಚಿತ್ರವನ್ನು ಪ್ರಕಟಿಸಿದ್ದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

‘ಬಾಲಕಿಯ ಗುರುತು ಪತ್ತೆಯಾಗದಿದ್ದರೆ  ಆರೋಪಿಗಳನ್ನು ಹುಡುಕಲು ಸಾಧ್ಯವಿಲ್ಲ. ಆ ಕಾರಣದಿಂದಲೇ ಬಾಲಕಿಯ ಚಿತ್ರವನ್ನು ನಾವೇ ಬಹಿರಂಗಪಡಿಸಿದ್ದೇವೆ. ಆಕೆಯ ಗುರುತಿನ ಬಗ್ಗೆ ಮಾಹಿತಿ ನೀಡಿದವರಿಗೆ ₹ 20 ಸಾವಿರ ಬಹುಮಾನ ನೀಡಲಾಗುತ್ತದೆ’ ಎಂದು ಸೂರತ್ ಪೊಲೀಸ್ ಆಯುಕ್ತ ಸತೀಶ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.

ಆದರೆ ಟೀಕೆ ವ್ಯಕ್ತವಾದ ಕೆಲವೇ ಗಂಟೆಗಳಲ್ಲಿ ಸೂರತ್ ಪೊಲೀಸರು ತಮ್ಮ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಗಳಲ್ಲಿ ಪ್ರಕಟಿಸಿದ್ದ ಬಾಲಕಿಯ ಚಿತ್ರವನ್ನು ತೆಗೆದುಹಾಕಿದ್ದಾರೆ.

**

* ಏಪ್ರಿಲ್ 5ರಂದು ಬಾಲಕಿಯ ಸಾವು ಸಂಭವಿಸಿದೆ

* ಆಕೆ ಮೃತಪಟ್ಟ ದಿನವೂ ಆಕೆಯ ದೇಹದ ಮೇಲೆ ಹಲವು ಗಾಯಗಳಾಗಿವೆ

* ಆಕೆಗಾಗಿರುವ ಗಾಯಗಳಲ್ಲಿ ಹಲವು ಏಳು ದಿನಗಳಷ್ಟು ಹಳೆಯದಾಗಿವೆ

* ಬಾಲಕಿ ಮೇಲೆ ಏಳು ದಿನದ ಹಿಂದೆಯೇ ಅತ್ಯಾಚಾರ ನಡೆದಿದೆ ಎಂಬುದನ್ನು ಆಕೆಯ ಮರ್ಮಾಂಗದ ಮೇಲೆ ಆಗಿರುವ ಗಾಯಗಳು ದೃಢಪಡಿಸಿವೆ

* ಬಾಲಕಿಯನ್ನು ಹಗ್ಗದಿಂದ ಕಟ್ಟಿಹಾಕಿದ್ದರಿಂದ ಆದ ಗುರುತುಗಳೂ ಗಾಯದ ಸ್ವರೂಪ ಪಡೆದಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.