ADVERTISEMENT

ಬಾಲಾರೋಪಿ ವಯೋಮಿತಿ ಇಳಿಕೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 19:30 IST
Last Updated 2 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ಮಹತ್ವದ ಬೆಳ­ವಣಿಗೆಯೊಂದರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿ­ವಾಲಯವು (ಡಬ್ಲ್ಯುಸಿಡಿ) ಸಾಮೂಹಿಕ ಅತ್ಯಾಚಾರ­ದಂತಹ ಹೀನ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಬಾಲಾರೋಪಿಯ ವಯೋಮಿತಿಯನ್ನು 18ರಿಂದ 16 ವರ್ಷಕ್ಕೆ ಇಳಿಸುವ ಪ್ರಸ್ತಾವ ಮುಂದಿಟ್ಟಿದೆ.

ಇಂತಹ ಹೇಯ ಅಪರಾಧ ಕೃತ್ಯದ ಆರೋಪಿಯು 16 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವನಾಗಿದ್ದರೆ ಅವನನ್ನು ಭಾರತೀಯ ದಂಡ ಸಂಹಿತೆ (ಐಪಿಸಿ) ಅನ್ವಯ ವಯಸ್ಕ ಆರೋಪಿಯಂತೆಯೇ ಪರಿಗಣಿಸಬೇಕು ಎಂದು  ಪ್ರಸ್ತಾವದಲ್ಲಿ ಹೇಳಲಾಗಿದೆ. ಈ ಕುರಿತು ಕರಡು ಟಿಪ್ಪಣಿ ಸಿದ್ಧ­ಪ­ಡಿಸಿ­ರುವ ‘ಡಬ್ಲ್ಯುಸಿಡಿ’, ಇದನ್ನು ಕೇಂದ್ರ ಸಚಿವ ಸಂಪುಟದ ಮುಂದಿಡಲು ಚಿಂತನೆ ನಡೆಸಿದೆ. ಈ ಪ್ರಸ್ತಾವದ ಬಗ್ಗೆ ಸರ್ಕಾರ ಕೆಲವು ದಿನಗಳಲ್ಲೇ ನಿರ್ಧಾರ ಕೈ­ಗೊಳ್ಳುವ ಸಾಧ್ಯತೆ ಎಂದು ಮೂಲ­ಗಳು ತಿಳಿಸಿವೆ.

ಡಿ. 16ರಂದು ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ­ದಲ್ಲಿ ಉಳಿದ ಅಪರಾಧಿಗಳಿಗಿಂತ ಅತ್ಯಂತ ಮೃಗೀಯವಾಗಿ ನಡೆದು ಕೊಂಡ­ವನು ಬಾಲಾರೋಪಿ. ಆದರೆ, ಆತನಿಗೆ ಬಾಲನ್ಯಾಯ ಕಾಯ್ದೆ ಅನ್ವಯ ನೀಡಲಾದ ಶಿಕ್ಷೆ ತೀರಾ ಕಡಿಮೆ ಎಂಬ ಅಭಿಪ್ರಾಯಗಳು ಬಲವಾಗಿ ವ್ಯಕ್ತವಾದ  ಹಿನ್ನೆಲೆಯಲ್ಲಿ ‘ಡಬ್ಲ್ಯುಸಿಡಿ’ ಈ ಮಹತ್ವದ ಪ್ರಸ್ತಾವ ಮಾಡಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.