ನವದೆಹಲಿ: ಹಿರಿಯ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ವಿರೋಧದ ನಡುವೆಯೂ ಬಳ್ಳಾರಿಯಿಂದ ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ಟಿಕೆಟ್ ನೀಡಲಾಗಿದೆ.
ಶ್ರೀರಾಮುಲು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಸುಷ್ಮಾ ವಿರೋಧ ವ್ಯಕ್ತಪಡಿಸಿದ್ದರು. ರಾಜ್ಯ ಬಿಜೆಪಿ ಬಳ್ಳಾರಿಯಿಂದ ಶ್ರೀರಾಮುಲು ಹೆಸರನ್ನು ಶಿಫಾರಸು ಮಾಡಿತ್ತು. ಬಿಜೆಪಿ ಚುನಾವಣಾ ಸಮಿತಿ ಈ ಶಿಫಾರಸ್ಸನ್ನು ಅಂತಿಮಗೊಳಿಸಿತ್ತು. ಆದರೆ, ಹಿರಿಯ ನಾಯಕಿ ವಿರೋಧದಿಂದಾಗಿ ಕೆಲವು ಸಮಯ ತಡೆ ಹಿಡಿಯಲಾಗಿತ್ತು.
ಗುರುವಾರ ತಡರಾತ್ರಿ ಬಿಜೆಪಿ ಚುನಾವಣಾ ಸಮಿತಿ ಶ್ರೀರಾಮುಲು ಹೆಸರನ್ನು ಅಧಿಕೃತವಾಗಿ ಪ್ರಕಟಿಸಿತು. ಬೀದರ್ ಲೋಕಸಭೆ ಕ್ಷೇತ್ರದಿಂದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಭಗವಂತ ಖೂಬಾ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಗುರುಪಾದಪ್ಪ ನಾಗಮಾರಪಲ್ಲಿ ಮತ್ತು ಅವರ ಪುತ್ರ ಸೂರ್ಯಕಾಂತ ಅಸಮಾಧಾನಗೊಂಡಿದ್ದಾರೆ.
ಹಾಸನದಿಂದ ಲೋಕಸಭೆ ಮಾಜಿ ಸದಸ್ಯ ವಿಜಯ ಶಂಕರ್ ಹೆಸರನ್ನು ಪ್ರಕಟಿಸಲಾಗಿದೆ. ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ವಿರುದ್ಧ ವಿಜಯ ಶಂಕರ್ ಕಣಕ್ಕಿಳಿಯಲಿದ್ದಾರೆ. ವಿಜಯ ಶಂಕರ್ ಮೊದಲಿಗೆ ಮೈಸೂರಿನಿಂದ ಟಿಕೆಟ್ ಕೊಡಬೇಕೆಂದು ಹಟ ಹಿಡಿದಿದ್ದರು. ಆದರೆ, ಬಿಜೆಪಿ ಅವರ ಬೇಡಿಕೆಯನ್ನು ಮಾನ್ಯ ಮಾಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.