ADVERTISEMENT

ಬಿಜೆಪಿ ಸಂಸ್ಥಾಪನಾ ದಿನಾಚರಣೆ: ಗುಜರಾತ್‌ಗೆ ಗಡ್ಕರಿ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): `ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ನಡೆದಿದ್ದು, ಅಭಿವೃದ್ಧಿಗೆ ಗುಜರಾತ್ ಮಾದರಿ ರಾಜ್ಯವೆಂದು ಹೋಲಿಕೆ ಮಾಡುವಷ್ಟರ ಮಟ್ಟಿಗೆ ಪ್ರಗತಿಯಾಗಿದೆ~ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಶ್ಲಾಘಿಸಿದರು.

ಶುಕ್ರವಾರ ಇಲ್ಲಿ ನಡೆದ ಪಕ್ಷದ 32ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, `ಬಿಜೆಪಿ ಮತ್ತು ಎನ್‌ಡಿಎ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕೈಗಾರಿಕಾ ಅಭಿವೃದ್ಧಿ, ಜಿಡಿಪಿ ಮತ್ತು ತಲಾ ಆದಾಯ ಹೆಚ್ಚಿದ್ದು, ಶಾಂತಿ ಮತ್ತು ಅಭಿವೃದ್ಧಿ ಆಗಸದಲ್ಲಿ ಮಿನುಗುತ್ತಿವೆ~ ಎಂದರು.

`ಮಧ್ಯಪ್ರದೇಶದಲ್ಲಿ ಕೃಷಿ ಬೆಳವಣಿಗೆ ಶೇ 10ಕ್ಕೆ ತಲುಪಿದ್ದು, ಗುಜರಾತ್‌ನಲ್ಲಿ ಶೇ 14ರಷ್ಟಿದೆ. ಉತ್ತಮ ಆಡಳಿತ ಮತ್ತು ಆದರ್ಶ ರಾಷ್ಟ್ರ ನಿರ್ಮಾಣ ತಳಹದಿ ಮೇಲೆ ಕೆಲಸ ಮಾಡಿರುವುದೇ ಈ ಅಭಿವೃದ್ಧಿಗೆ ಕಾರಣ~ ಎಂದರು.

`ಈಗಿನ ಪರಿಸ್ಥಿತಿ ಬದಲಾಗಬೇಕಿದೆ. ಕತ್ತಲು ಬೆಳಕಿನ ದಾರಿಯನ್ನು ತೋರಿಸುತ್ತದೆ. ಕಮಲ ಅರಳುತ್ತದೆ. ನಮಗೆ ಅಟಲ್ ಬಿಹಾರಿ ಅವರ ಆಶೀರ್ವಾದವಿದೆ~ ಎಂದು ನುಡಿದರು.

ಈಚೆಗೆ ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ತೃಪ್ತಿಕರ ಸಾಧನೆ ಮಾಡದಿದ್ದರೂ ಪಕ್ಷ ಅಧಿಕಾರದಲ್ಲಿರುವ ಗುಜರಾತ್ ಮತ್ತು ಮಧ್ಯಪ್ರದೇಶಗಳಲ್ಲಿ ಉತ್ತಮ ಪ್ರಗತಿ ಸಾಧಿಸಿದೆ ಎಂದರು.

ಭಾಷಣದುದ್ದಕ್ಕೂ ವಾಜಪೇಯಿ ಅವರನ್ನು ಸ್ಮರಿಸಿದ ಗಡ್ಕರಿ, `ಕತ್ತಲೆಯ ಬಳಿಕ ಬೆಳಕು ಕಾಣಿಸುತ್ತದೆ ಎಂದು ವಾಜಪೇಯಿ ಹೇಳುತ್ತಿದ್ದರು~ ಎಂದರು.

ವೃದ್ಧಾಪ್ಯದ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ವಾಜಪೇಯಿ ಅವರನ್ನು ಕಳೆದ ಎಂಟು ದಿನಗಳ ಹಿಂದೆ ಭೇಟಿಯಾಗಿರುವುದಾಗಿ ಹೇಳಿದ ಗಡ್ಕರಿ, `ಅವರ ಆಶೀರ್ವಾದ ಪಡೆಯಲು ಹದಿನೈದು ದಿನಗಳಿಗೊಮ್ಮೆ ಅವರನ್ನು ಭೇಟಿಯಾಗುತ್ತೇನೆ~ ಎಂದು ತಿಳಿಸಿದರು.

ದೇಶದ ಅಭಿವೃದ್ಧಿ ಮೇಲೆ ಬೆಳಕು ಚೆಲ್ಲುವ `ಭಾರತದ ಮುನ್ನೋಟ- 2025~ ಎನ್ನುವ ಸಾಕ್ಷ್ಯ ಚಿತ್ರವನ್ನು ಈ ವರ್ಷಾಂತ್ಯಕ್ಕೆ ಬಿಡುಗಡೆ ಮಾಡುವುದಾಗಿಯೂ ತಿಳಿಸಿದರು.

`ಬಿಜೆಪಿಯು ಸಂಸದರು ಮತ್ತು ಶಾಸಕರನ್ನು ಅಥವಾ ಅಧಿಕಾರವನ್ನು ನೀಡುವ ಕಾರ್ಖಾನೆ ಅಲ್ಲ. ಸಿದ್ಧಾಂತ ಮತ್ತು ಅಭಿವೃದ್ಧಿ ನೆಲೆಯಲ್ಲಿ ಪಕ್ಷ ಬೆಳೆಸಬೇಕು~ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.