ADVERTISEMENT

ಬಿಹಾರದಲ್ಲಿ ದಲಿತ ಮಹಿಳೆಯರ ‘ಸರಿಗಮ’

ಪಟ್ನಾದಲ್ಲಿ ಸದ್ದು ಮಾಡುತ್ತಿದೆ ಮಹಿಳೆಯರೇ ಇರುವ ಮ್ಯೂಸಿಕ್‌ ಬ್ಯಾಂಡ್‌

ಪಿಟಿಐ
Published 17 ಜೂನ್ 2018, 17:48 IST
Last Updated 17 ಜೂನ್ 2018, 17:48 IST
‘ಸರ್‌ಗಮ್‌ ಬ್ಯಾಂಡ್‌’ ಸದಸ್ಯೆಯರು
‘ಸರ್‌ಗಮ್‌ ಬ್ಯಾಂಡ್‌’ ಸದಸ್ಯೆಯರು   

ಪಟ್ನಾ: ದಲಿತ ಮಹಿಳೆಯರೇ ಇರುವ ಮ್ಯೂಸಿಕ್‌ ಬ್ಯಾಂಡ್‌ ಪಟ್ನಾದಲ್ಲಿ ಸದ್ದು ಮಾಡುತ್ತಿದೆ. ಸಂಗೀತದ ಉಪಕರಣಗಳನ್ನು ನುಡಿಸುವುದರಿಂದ ಹಿಡಿದು, ಹಾಡುವ ತನಕ ಎಲ್ಲವನ್ನೂ ಮಹಿಳೆಯರೇ ಮಾಡುವುದು ಈ ಬ್ಯಾಂಡ್‌ನ ವಿಶೇಷ.

30 ವರ್ಷ ಆಸುಪಾಸಿನ ಹತ್ತು ಮಹಿಳೆಯರನ್ನು ಒಳಗೊಂಡಿರುವ ಈ ತಂಡಕ್ಕೆ ‘ಸರ್‌ಗಮ್‌ ಬ್ಯಾಂಡ್‌’ ಎಂದು ಹೆಸರಿಡಲಾಗಿದೆ. ದಾನಪುರ ಉಪವಿಭಾಗದ ಧಿಬ್ರಾ ಗ್ರಾಮದ ಈ ತಂಡವು ತನ್ನ ಸುತ್ತಲಿನಲ್ಲಿ ಹೊಸ ಆರ್ಥಿಕ ಹಾಗೂ ಸಾಮಾಜಿಕ ಕ್ರಾಂತಿಗೂ ಕಾರಣವಾಗಿದೆ.

‘ಮಹಿಳೆಯರೇ ಇರುವ ಸಂಗೀತ ತಂಡವೊಂದನ್ನು ಕಟ್ಟಬೇಕೆಂಬ ಉಪಾಯ 2016ರಲ್ಲಿ ಹೊಳೆಯಿತು. ಕೃಷಿ ಕಾರ್ಮಿಕರೇ ಹೆಚ್ಚಾಗಿದ್ದ ರವಿದಾಸ್‌ ಸಮುದಾಯದ ಮಹಿಳೆಯರ ಜೊತೆ ಆಗ ನಾನು ಕೆಲಸ ಮಾಡುತ್ತಿದ್ದೆ. ಈ ಮಹಿಳೆಯರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೇಲೆತ್ತಬೇಕು ಎಂಬ ಉದ್ದೇಶದಿಂದ ಈ ತಂಡ ರೂಪಿಸಿದೆ’ ಎನ್ನುತ್ತಾರೆ ‘ನಾರಿ ಗುಂಜನ್‌’ ಎಂಬ ಸರ್ಕಾರೇತರ ಸಂಸ್ಥೆಯ ಮಾಲೀಕರಾದ ಸುಧಾ ವರ್ಗೀಸ್.

ADVERTISEMENT

‘ಧಾಬ್ರಿ ಮಹಿಳೆಯರೊಂದಿಗೆ ಈ ಯೋಚನೆಯನ್ನು ನಾನು ಹಂಚಿಕೊಂಡಾಗ ಅವರು ಹಿಂಜರಿದರು. ಅದು ಸ್ತ್ರೀಯರಿಂದಾಗುವಂಥದ್ದಲ್ಲ ಎಂದರು. ಮಹಿಳೆಯರೇ ಇರುವ ಮ್ಯೂಸಿಕಲ್‌ ಬ್ಯಾಂಡ್‌ ಇರುತ್ತದೆ ಎಂಬುದನ್ನು ಈ ಭಾಗದಲ್ಲಿ ಯಾರೂ ಕೇಳಿಯೂ ಇರಲಿಲ್ಲ. ಆದರೆ, ಅವರಿಗೆ ಮನವರಿಕೆ ಮಾಡಿದ ನಂತರ, ಬ್ಯಾಂಡ್‌ನಲ್ಲಿ ಪಾಲ್ಗೊಳ್ಳುವ ಧೈರ್ಯ ಮಾಡಿದರು’ ಎಂದು ಅವರು ಹೇಳುತ್ತಾರೆ.

‘ಸವಿತಾ ಎಂಬುವವರ ನೇತೃತ್ವದಲ್ಲಿ ತಂಡ ರಚಿಸಲಾಯಿತು. ಆದಿತ್ಯ ಗುಂಜಾನ್‌ ಕುಮಾರ್‌ ಅವರಿಗೆ ಡ್ರಮ್‌ ಬಾರಿಸುವುದು, ತಾಳ ಹಾಕುವುದು ಮತ್ತು ಹಾಡುವುದನ್ನು ಹೇಳಿಕೊಟ್ಟರು’ ಎಂದು ಸುಧಾ ಹೇಳಿದರು.

‘ಒಪ್ಪಿಕೊಂಡ ಮೇಲೆ ಬ್ಯಾಂಡ್‌ ಮುಂದುವರಿಸುವುದು ಸುಲಭವಾಗಿರಲಿಲ್ಲ. ನಮ್ಮ ಪತಿಯಂದಿರು, ಸಂಬಂಧಿಕರು ನಮ್ಮನ್ನು ನೋಡಿ ನಗತೊಡಗಿದರು. ಹೀಯಾಳಿಸಿದರು. ಆದರೆ, ಕ್ರಮೇಣ ಎಲ್ಲರೂ ನಮ್ಮನ್ನು ಪ್ರೋತ್ಸಾಹಿಸತೊಡಗಿದರು’ ಎನ್ನುತ್ತಾರೆ ತಂಡದ ನಾಯಕಿ ಸವಿತಾ.

‘ಮೊದಲು ದಾನಪುರದಿಂದ ಕಾರ್ಯಕ್ರಮ ನೀಡಲು ಆರಂಭಿಸಿದೆವು. ಒಂದು ಪ್ರದರ್ಶನಕ್ಕೆ ಮೊದಲು ಒಬ್ಬರಿಗೆ ₹250 ಕೊಡುತ್ತಿದ್ದರು. ಸಂಪೂರ್ಣ ಮಹಿಳೆಯರೇ ಕಾರ್ಯಕ್ರಮ ನೀಡುತ್ತಾರೆ ಎಂಬುದು ಸುತ್ತ–ಮುತ್ತಲಿನ ಗ್ರಾಮಸ್ಥರಲ್ಲಿಯೂ ಕುತೂಹಲ ಹುಟ್ಟಿಸಿತು. ಈಗ ಪಟ್ನಾದಲ್ಲಿಯೂ ಕಾರ್ಯಕ್ರಮ ನೀಡುತ್ತಿದ್ದೇವೆ. ಒಂದು ಪ್ರದರ್ಶನಕ್ಕೆ ಒಬ್ಬರಿಗೆ ₹1000 ನೀಡುತ್ತಿದ್ದಾರೆ’ ಎಂದು ಅವರು ಸಂತಸ ವ್ಯಕ್ತಪಡಿಸಿದರು.

‘ಡ್ರಮ್‌ ಮತ್ತು ಝಾಂಜ್‌ ಬಾರಿಸುವುದು ಮಾತ್ರ ಬರುತ್ತಿದೆ. ಈಗ ಕೊಳಲು ನುಡಿಸುವುದನ್ನು ಕಲಿಯುತ್ತಿದ್ದೇವೆ. ಮುಂದೆ, ಇನ್ನೂ ಹಲವು ಹೊಸ ಸಂಗೀತ ಉಪಕರಣಗಳನ್ನು ಬಳಸುವುದನ್ನು ಕಲಿತು ಜನರಿಗೆ ಹೆಚ್ಚು ಮನರಂಜನೆ ನೀಡುವ ಉದ್ದೇಶವಿದೆ’ ಎಂದು ಸವಿತಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.