ADVERTISEMENT

ಬಿ ಮಾಳಿಗೆ ಸದ್ಯಕ್ಕೆ ತೆರೆಯುವುದು ಬೇಡ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ತಿರುವನಂತಪುರದ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಇತರ ನೆಲಮಾಳಿಗೆಗಳಲ್ಲಿ ಶೋಧಿಸಿರುವ ಬೆಲೆ ಬಾಳುವ ವಸ್ತುಗಳ ದಾಖಲೆ ಹಾಗೂ ಸಂರಕ್ಷಣಾ ಕಾರ್ಯ ಮುಗಿದ ಬಳಿಕವಷ್ಟೇ `ಬಿ~ನೆಲಮಾಳಿಗೆಯನ್ನು ತೆರೆಯಲಾಗುತ್ತದೆ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.

ದೇವಸ್ಥಾನದ ಭದ್ರತೆಯನ್ನು ಅರೆಸೇನಾ ಪಡೆಗೆ ಹಸ್ತಾಂತರಿಸಬೇಕೆನ್ನುವ ತಜ್ಞರ ಸಮಿತಿಯ ಮನವಿಯನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರನ್ನು ಒಳಗೊಂಡ ನ್ಯಾಯಪೀಠವು, ಸುಮಾರು ಒಂದೂವರೆ ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತಿನ ರಕ್ಷಣೆಗಾಗಿ  ದೇವಸ್ಥಾನಕ್ಕೆ ಸರ್ಪಗಾವಲು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಸಂಪತ್ತು ಹಾಗೂ ದೇವಸ್ಥಾನದ ರಕ್ಷಣೆಗೆ ಆಡಳಿತ ಮಂಡಳಿಯು ವಾರ್ಷಿಕವಾಗಿ 25 ಲಕ್ಷ ರೂಪಾಯಿ ನೀಡಲಿದೆ. ಅಗತ್ಯವಿರುವ ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸುತ್ತದೆ ಎಂದೂ ಪೀಠ ಹೇಳಿದೆ.

`ಸಂಪತ್ತಿನ ಸಂರಕ್ಷಣೆಗಾಗಿ ಖಾಸಗಿ ಸಂಸ್ಥೆಗಳಿಗೆ ಯಾವುದೇ ಟೆಂಡರ್ ಕರೆದಿಲ್ಲ. ಈ ಕೆಲಸವನ್ನು ಕೇರಳ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ನಿಯಮಿತ (ಕೆಲ್ಟ್ರಾನ್) ಮಾಡಲಿದೆ. ಮೂರು ತಿಂಗಳ ಬಳಿಕ ಮತ್ತೆ ಈ ವಿಷಯವನ್ನು ಕೈಗೆತ್ತಿಕೊಳ್ಳಲಾಗುತ್ತದೆ~ ಎಂದು ತಿಳಿಸಿದೆ.

ದೇವಸ್ಥಾನದ ಭದ್ರತೆ ಹಾಗೂ `ಬಿ~ ನೆಲಮಾಳಿಗೆ ತೆರೆಯುವ ಕುರಿತ ಆದೇಶವನ್ನು ಕೋರ್ಟ್ ಇದೇ ತಿಂಗಳ 16ರಂದು ಕಾಯ್ದಿರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.