ADVERTISEMENT

ಬುಖಾರಿಗೆ ಕಾಶ್ಮೀರಿಗಳ ಕಣ್ಣೀರಿನ ವಿದಾಯ

ಅಪರಿಚಿತ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದ ‘ರೈಸಿಂಗ್ ಕಾಶ್ಮೀರ್’ ಸಂಪಾದಕ : ಸ್ವಗ್ರಾಮದಲ್ಲಿ ಅಂತಿಮ ಸಂಸ್ಕಾರ

ಪಿಟಿಐ
Published 15 ಜೂನ್ 2018, 19:30 IST
Last Updated 15 ಜೂನ್ 2018, 19:30 IST
ಶವಸಂಸ್ಕಾರಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ಜನಸ್ತೋಮ. (ಒಳಚಿತ್ರದಲ್ಲಿ ಬುಖಾರಿ)
ಶವಸಂಸ್ಕಾರಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ಜನಸ್ತೋಮ. (ಒಳಚಿತ್ರದಲ್ಲಿ ಬುಖಾರಿ)   

ಕ್ರೀರಿ (ಜಮ್ಮು ಮತ್ತು ಕಾಶ್ಮೀರ): ಅಪರಿಚಿತ ಬಂದೂಕು ಧಾರಿಯ ಗುಂಡಿಗೆ ಬಲಿಯಾಗಿದ್ದ ‘ರೈಸಿಂಗ್ ಕಾಶ್ಮೀರ್’ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮದಲ್ಲಿ ಶುಕ್ರ ವಾರ ನಡೆಯಿತು.

ಶ್ರೀನಗರದಿಂದ ಕೆಲವೇ ಗಂಟೆಗಳ ಪಯಣದಷ್ಟು ದೂರದಲ್ಲಿರುವ ಬಾರಾ ಮುಲ್ಲಾ ಜಿಲ್ಲೆಯ ಕ್ರೀರಿಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಪತ್ರಕರ್ತರು, ರಾಜಕಾರಣಿಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಸಾರ್ವ ಜನಿಕರು ಭಾಗವಹಿಸಿದ್ದರು.

ಪಾಕಿಸ್ತಾನದ ಖಂಡನೆ: ‘ಬುಖಾರಿ ಅವರ ಹತ್ಯೆಯಿಂದ ನಮಗೆ ಆಘಾತ ಮತ್ತು ದುಃಖವಾಗಿದೆ. ಈ ಹತ್ಯೆಯನ್ನು ಪಾಕಿಸ್ತಾನವು ಖಂಡಿಸುತ್ತದೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.

ADVERTISEMENT

(ಬುಖಾರಿ ಅವರ ಪತ್ನಿಯ ಅಳಲು)

ಶಂಕಿತರ ಚಿತ್ರ ಬಿಡುಗಡೆ: ಉಗ್ರರೇ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

‘ದಾಳಿ ನಡೆದ ಸ್ಥಳದಿಂದ ಕೂಗಳತೆ ದೂರದಲ್ಲಿರುವ ಎರಡು ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ, ಮೂವರು ಬೈಕ್‌ ಒಂದರಲ್ಲಿ ಹೋಗುತ್ತಿರುವ ದೃಶ್ಯ ಸೆರೆ ಯಾಗಿದೆ. ದಾಳಿ ಸಮಯದಲ್ಲಿ ಬೇರೆ ಯಾವುದೇ ಬೈಕ್‌ಗಳು ಅಲ್ಲಿ ಸಂಚರಿಸಿಲ್ಲ. ಹೀಗಾಗಿ ಆ ಮೂವರೇ ದಾಳಿಕೋರರು ಎಂದು ಶಂಕಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಒಬ್ಬನ ಬಂಧನ: ಹತ್ಯೆಗೆ ಸಂಬಂಧಿಸಿ ದಂತೆ ಶಂಕಿತ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬುಖಾರಿ ಅವರ ದೇಹವನ್ನು ಕಾರಿನಿಂದ ಇಳಿಸು ವಾಗ, ಕಾರಿನಲ್ಲಿದ್ದ ಪಿಸ್ತೂಲನ್ನು ವ್ಯಕ್ತಿಯೊಬ್ಬ ಎತ್ತಿಕೊಂಡು ಹೋಗಿದ್ದಾನೆ.

ಹತ್ಯೆಯ ನಂತರದ ಘಟನೆಗಳನ್ನು ಸ್ಥಳದಲ್ಲಿದ್ದವರು ಚಿತ್ರೀಕರಿಸುವ ದೃಶ್ಯಾವಳಿಗಳಲ್ಲಿ ಇದು ದಾಖಲಾಗಿದೆ. ಆ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಆತನಿಂದ ಪಿಸ್ತೂಲನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಬುಖಾರಿ ತಮ್ಮ ಅಂಕಣ ಮತ್ತು ಚರ್ಚೆಗಳಲ್ಲಿ ಜನರ ಸಮಸ್ಯೆಗಳ ಬಗ್ಗೆ ಸದಾ ದನಿ ಎತ್ತುತ್ತಿದ್ದರು. ಆದರೆ ಇಂದು ಅತ್ಯಂತ ಕ್ರೂರವಾಗಿ ಆ ದನಿಯನ್ನು ಹತ್ತಿಕ್ಕಲಾಗಿದೆ.

–ಮೆಹಬೂಬಾ ಮುಫ್ತಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ

**

ಇದು ಅತ್ಯಂತ ಹೇಯ ಮತ್ತು ಖಂಡನೀಯ ಕೃತ್ಯ. ಬುಖಾರಿ ಹತ್ಯೆಯಿಂದ ಪತ್ರಿಕಾ ಲೋಕಕ್ಕೆ ಮತ್ತು ಅವರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.

–ಎನ್.ಎನ್.ವ್ಹೋರಾ, ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ

**

ಮುಖ್ಯವಾಹಿನಿಯ ರಾಜಕಾರಣಕ್ಕೆ ಸರಿಹೊಂದುವಂತೆ ಬರೆಯದ ಪತ್ರಕರ್ತರಿಗೆಲ್ಲಾ ಅಪಾಯ ಕಾದಿದೆ ಎಂಬ ಅಭಿಪ್ರಾಯ ಈಗ ಮತ್ತಷ್ಟು ಗಟ್ಟಿಗೊಳ್ಳುತ್ತಿದೆ.

–ಎಂ.ವೈ.ತಾರಿಗಾಮಿ, ಕುಲಗಾಂನ ಸಿಪಿಎಂ ಶಾಸಕ

**

ಇಂತಹ ಆಘಾತದ ಸಂರ್ಭದಲ್ಲೂ ಪತ್ರಿಕೆಯ ಸಂಚಿಕೆ ಹೊರತಂದು, ರೈಸಿಂಗ್ ಕಾಶ್ಮೀರ್‌ನ ಸಿಬ್ಬಂದಿ ಬುಖಾರಿ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಒಮರ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ

**

ಮುಖಪುಟದಲ್ಲಿ ಶ್ರದ್ಧಾಂಜಲಿ

ಶುಜಾತ್ ಬುಖಾರಿ ಹತ್ಯೆಯನ್ನು ಖಂಡಿಸಿ ರೈಸಿಂಗ್ ಕಾಶ್ಮೀರ್ ಪತ್ರಿಕೆಯು ಶುಕ್ರವಾರದ ಸಂಚಿಕೆಯ ಮುಖಪುಟವನ್ನು ಕಪ್ಪು–ಬಿಳುಪಾಗಿ ಪ್ರಕಟಿಸಿದೆ. ಮುಖಪುಟದಲ್ಲಿ ಬುಖಾರಿ ಅವರ ಚಿತ್ರವನ್ನು ಪ್ರಕಟಿಸಲಾಗಿದೆ. ಚಿತ್ರಕ್ಕೆ ಹಿನ್ನೆಲೆಯಾಗಿ ಕಪ್ಪುಬಣ್ಣವನ್ನು ಬಳಸಲಾಗಿದೆ.

‘ನೀವು ದಿಢೀರ್ ಎಂದು ನಮ್ಮನ್ನು ಬಿಟ್ಟುಹೋಗಿದ್ದೀರಿ. ಆದರೆ ನಮ್ಮ ವೃತ್ತಿಯಲ್ಲಿ ನೀವೇ ದಾರಿದೀಪವಾಗಿರಲಿದ್ದೀರಿ. ನಿಮ್ಮನ್ನು ನಮ್ಮಿಂದ ಕಸಿದುಕೊಂಡ ಹೇಡಿಗಳ ಈ ಕುಕೃತ್ಯಕ್ಕೆ ನಾವು ಹೆದರುವುದಿಲ್ಲ. ಸತ್ಯ ಎಷ್ಟೇ ಕಹಿಯಾಗಿದ್ದರೂ ಅದನ್ನು ಹೇಳಲೇಬೇಕು ಎಂಬ ನಿಮ್ಮ ನೀತಿಯನ್ನು ನಾವು ಎತ್ತಿಹಿಡಿಯುತ್ತೇವೆ. ಚಿರಶಾಂತಿ ಸಿಗಲಿ’ ಎಂಬ ಬರಹವನ್ನು ಚಿತ್ರದ ಕೆಳಗೆ ಪ್ರಕಟಿಸಲಾಗಿದೆ.

**

ಒಬ್ಬನ ಬಂಧನ

ಹತ್ಯೆಗೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬುಖಾರಿ ಅವರ ದೇಹವನ್ನು ಕಾರಿನಿಂದ ಇಳಿಸುವಾಗ, ಕಾರಿನಲ್ಲಿದ್ದ ಪಿಸ್ತೂಲನ್ನು ವ್ಯಕ್ತಿಯೊಬ್ಬ ಎತ್ತಿಕೊಂಡು ಹೋಗಿದ್ದಾನೆ.

ಹತ್ಯೆಯ ನಂತರದ ಘಟನೆಗಳನ್ನು ಸ್ಥಳದಲ್ಲಿದ್ದವರು ಚಿತ್ರೀಕರಿಸುವ ದೃಶ್ಯಾವಳಿಗಳಲ್ಲಿ ಇದು ದಾಖಲಾಗಿದೆ. ಆ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಆತನಿಂದ ಪಿಸ್ತೂಲನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.