ADVERTISEMENT

ಬೆಂಗಳೂರು ಮಲಿನ ನಗರ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2012, 19:42 IST
Last Updated 28 ನವೆಂಬರ್ 2012, 19:42 IST

ಜೆರುಸಲೇಂ (ಪಿಟಿ): ಇತ್ತೀಚಿನ ದಿನ ಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ `ತಿಪ್ಪೆಗುಂಡಿ ನಗರ' (ಗಾರ್ಬೆಜ್ ಸಿಟಿ) ಎಂಬ ಕುಖ್ಯಾತಿಗೆ ಪಾತ್ರ ವಾಗಿರುವ ಉದ್ಯಾನ ನಗರಿ ಬೆಂಗಳೂರು, ಇದೀಗ ಮಾಲಿನ್ಯದ ವಿಷಯದಲ್ಲಿಯೂ ಸುದ್ದಿ ಮಾಡುತ್ತಿದೆ.

`ಗರಿಷ್ಠ ಪ್ರಮಾಣದ ಮಾಲಿನ್ಯ ಇರುವ ವಿಶ್ವದ ಮುಂಚೂಣಿ ಮಹಾ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಕೂಡ ಇದೆ' ಎಂದು ಹೊಸ ಅಧ್ಯಯನ ಹೇಳಿದೆ.

ಬೆಂಗಳೂರು ಮಾತ್ರವಲ್ಲದೆ ಈಶಾನ್ಯ ಚೀನಾ, ಮಧ್ಯಪ್ರಾಚ್ಯ ಹಾಗೂ ಮಧ್ಯ ಆಫ್ರಿಕಾ ದೇಶಗಳು ಕೂಡ ಈ ಸಾಲಿಗೆ ಸೇರುತ್ತವೆ. `2002 ಹಾಗೂ 2010 ಅವಧಿಯಲ್ಲಿ ಇಲ್ಲಿ ವಾಯು ಮಾಲಿನ್ಯ ಶೇ 34ರಷ್ಟು ಹೆಚ್ಚಳವಾಗಿದೆ' ಎಂದು ತಜ್ಞರು ಹೇಳಿದ್ದಾರೆ.    ವಾಹನ ಹಾಗೂ ಕೈಗಾರಿಕೆಗಳು ಉಗುಳುವ ಹೊಗೆ, ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆಯಿಂದ ಮಹಾನಗರಗಳಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ ಎಂದೂ ಸಂಶೋಧಕರು ಹೇಳುತ್ತಾರೆ.

ADVERTISEMENT

ವಾಯು ಮಾಲಿನ್ಯ ತಪಾಸಣೆಗೆ `ನಾಸಾ' ಉಡಾವಣೆ ಮಾಡಿದ್ದ ಮೂರು ಉಪಗ್ರಹಗಳಿಂದ ಪಡೆದುಕೊಂಡ ಮಾಹಿತಿ ವಿಶ್ಲೇಷಿಸಿ ಇಸ್ರೇಲ್ ವಿಜ್ಞಾನಿಗಳು 189 ಮಹಾ ನಗರಗಳಲ್ಲಿ ಮಾಲಿನ್ಯ ಪ್ರಮಾಣ ಪತ್ತೆ ಮಾಡಿದ್ದಾರೆ.

`ಯೂರೋಪ್, ಈಶಾನ್ಯ ಮತ್ತು ಮಧ್ಯ ಉತ್ತರ ಅಮೆರಿಕದಲ್ಲಿ ವಾಯುಮಾಲಿನ್ಯ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ' ಎಂದು ಟೆಲ್ ಅವಿವ್ ವಿವಿಯ ವೆಬ್‌ಸೈಟ್ ಹೇಳಿದೆ.

ಶುದ್ಧ ಪರಿಸರ ನಗರಗಳು: ಹ್ಯೂಸ್ಟನ್‌ನಲ್ಲಿ  ಎಂಟು ವರ್ಷಗಳ ಅವಧಿಯಲ್ಲಿ ಶೇ 31ರಷ್ಟು ಮಾಲಿನ್ಯ ತಗ್ಗಿದೆ. ಕ್ಯೂರಿಟಿಬಾ, ಬ್ರೆಜಿಲ್‌ನಲ್ಲಿ ಶೇ 26ರಷ್ಟು ಹಾಗೂ ಸ್ಟಾಕ್‌ಹೋಂ, ಸ್ವೀಡನ್‌ನಲ್ಲಿ ಶೇ 23ರಷ್ಟು ಮಾಲಿನ್ಯ ಕಡಿಮೆಯಾಗಿದೆ.

ಗರಿಷ್ಠ ಮಾಲಿನ್ಯದ ನಗರಗಳು: ಅಮೆರಿಕದ ಕೆಲವು ನಗರಗಳಲ್ಲಿ ಗರಿಷ್ಠ ಪ್ರಮಾಣದ ಮಾಲಿನ್ಯ ಪತ್ತೆಯಾಗಿದೆ. ಪೋರ್ಟ್‌ಲೆಂಟ್‌ನಲ್ಲಿ ಶೇ 53 ಹಾಗೂ ಸೀಟಲ್‌ನಲ್ಲಿ ವಾಯು ಮಾಲಿನ್ಯ ಶೇ 32ರಷ್ಟು ಹೆಚ್ಚಳವಾಗಿದೆ.

ಇದಕ್ಕೆ ಅನೇಕ ಬಾರಿ ಕಾಣಿಸಿಕೊಂಡ ಕಾಳ್ಗಿಚ್ಚೂ ಕಾರಣ ಎಂದು ಟೆಲ್ ಅವಿವ್ ವಿಶ್ವವಿದ್ಯಾಲಯದ ಭೂಭೌತಶಾಸ್ತ್ರ ಹಾಗೂ ಗ್ರಹ ವಿಜ್ಞಾನ ವಿಭಾಗದ ಪ್ರೊ. ಪಿನಾಸ್ ಅಲ್ಪರ್ಟ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.