ADVERTISEMENT

ಬೈಕ್ ಸ್ಟಂಟ್: ಗುಂಡಿಗೆ ಯುವಕ ಬಲಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2013, 19:59 IST
Last Updated 28 ಜುಲೈ 2013, 19:59 IST
ಕರಣ್ ಪಾಂಡೆ
ಕರಣ್ ಪಾಂಡೆ   

ದೆಹಲಿ (ಐಎಎನ್‌ಎಸ್):  ಬೈಕ್ ಸ್ಟಂಟ್ ಮಾಡುತ್ತಿರುವಾಗ ಹಿಂಬದಿ ಸವಾರ ಪೊಲೀಸರ ಗುಂಡೇಟಿಗೆ ಬಲಿಯಾದ ಘಟನೆ ದೆಹಲಿಯ ವಿಂಡ್ಸರ್ ಪ್ರದೇಶದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ.

ಬೈಕ್ ಸವಾರನಿಗೆ ಗಾಯಗಳಾಗಿವೆ. ಇಲ್ಲಿನ ಮಾಳವಿಯ ನಿವಾಸಿ ಕರಣ್ ಪಾಂಡೆ(20)ಪೊಲೀಸರ ಗುಂಡಿಗೆ ಬಲಿಯಾದ ಯುವಕ. ಈತ ತನ್ನ ಸ್ನೇಹಿತ ಪುನಿತ್ ಶರ್ಮನ ಬೈಕ್ ಹಿಂಭಾಗ ಕುಳಿತಿದ್ದ. ಬೆಳಗಿನ ಜಾವ 2.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: 35 ರಿಂದ 40 ಬೈಕ್ ಸವಾರರು ಗೋಲ್ ಧಕ್ ಖಾನ್ ಬಳಿಯ ಪಾರ್ಲಿಮೆಂಟ್ ರಸ್ತೆಯಲ್ಲಿ ಅಪಾಯಕಾರಿಯಾದ ಬೈಕ್ ಸ್ಟಂಟ್ ನಡೆಸುತ್ತಿದ್ದರು. ಈ ವಿಷಯ ಅರಿತ ಪೊಲೀಸರು ಸ್ಥಳಕ್ಕೆ ಧಾವಿಸಿ ರಸ್ತೆಯಲ್ಲಿ ಸ್ಟಂಟ್ ನಡೆಸದಂತೆ ತಾಕೀತು ಮಾಡಿದರು. ಆದರೆ ಯುವಕರು ಅದನ್ನು ಆಲಿಸದೆ ಎಲ್ಲರೂ ಗುಂಪುಗೂಡಿ ಪೊಲೀಸರು ಹಾಗೂ ಅವರ ವಾಹನಗಳತ್ತ ಕಲ್ಲು ತೂರಿದರು.

ಆಗ ಯುವಕರಿಗೆ ಎಚ್ಚರಿಕೆ ನೀಡಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ ಯುವಕರು ಬೈಕ್ ಸ್ಟಂಟ್ ಮಾಡುವುದನ್ನು ಮುಂದುವರಿಸಿದರು. ಬಳಿಕ ಪೊಲೀಸರು ಅವರ ಬೈಕ್ ಗಾಲಿಗಳನ್ನು ಪಂಕ್ಚರ್ ಮಾಡಲು ಅತ್ತ ಗುಂಡು ಹಾರಿಸಿದರು.

ಆಗ ಆಕಸ್ಮಿಕವಾಗಿ ಬೈಕ್ ಸವಾರನ ಹಿಂಭಾಗ ಕುಳಿತ ವ್ಯಕ್ತಿಗೆ ಗುಂಡು ತಗುಲಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.