ADVERTISEMENT

ಬ್ಯಾಂಕ್ ನೌಕರರ ಮುಷ್ಕರ್: ಸ್ತಬ್ಧಗೊಂಡ ವಾಣಿಜ್ಯ ಚಟುವಟಿಕೆಗಳು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 8:05 IST
Last Updated 22 ಆಗಸ್ಟ್ 2012, 8:05 IST

ಮುಂಬೈ (ಐಎಎನ್‌ಎಸ್): ಬ್ಯಾಂಕಿಂಗ್ ಕಾಯ್ದೆಗೆ ತಿದ್ದುಪಡಿ ತರುವುದು ಮತ್ತು ಖಂಡೇಲ್‌ವಾಲ್ ಸಮಿತಿ ಶಿಫಾರಸು ಜಾರಿ ವಿರೋಧಿಸಿ ಬುಧವಾರದಿಂದ ಎರಡು ದಿನ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಹಾಗೂ ಖಾಸಗಿ ಬ್ಯಾಂಕುಗಳ ನೌಕರರು ದೇಶವ್ಯಾಪಿ ಮುಷ್ಕರ ಕೈಗೊಂಡಿರುವ ಪರಿಣಾಮ ದೇಶದಾದ್ಯಂತ ಉದ್ಯಮಗಳು ಸೇರಿದಂತೆ ವಾಣಿಜ್ಯ ಚಟುವಟಿಕೆಗಳು ಸ್ತಬ್ಧಗೊಂಡಿವೆ.
 
27 ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು, 12 ಹಳೆ ತಲೆಮಾರಿನ ಖಾಸಗಿ ಬ್ಯಾಂಕುಗಳು ಮತ್ತು ಎಂಟು ವಿದೇಶಿ ಬ್ಯಾಂಕುಗಳು ಈ ಮುಷ್ಕರಕ್ಕೆ ಕೈಜೊಡಿಸಿದ್ದು, ಸುಮಾರು ಒಂದು ದಶಲಕ್ಷಕ್ಕೂ ಅಧಿಕ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಕಾರ್ಯದರ್ಶಿ ವಿಶ್ವಾಸ್ ಉಟಗಿ ತಿಳಿಸಿದರು.
 
ಹತ್ತು ಸಾವಿರಕ್ಕೂ ಅಧಿಕ ನೌಕರರು ಬುಧವಾರ ಸಂಜೆ ಆಜಾದ್ ಮೈದಾನದಲ್ಲಿ ಸೇರಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ರ‌್ಯಾಲಿ ನಡೆಸಲಾಗುತ್ತದೆ ಎಂದು ಉಟಗಿ ಹೇಳಿದರು. 
 
ಸದ್ಯ ಸಂಸತ್‌ನಲ್ಲಿ ಬಾಕಿ ಇರುವ  ಬ್ಯಾಂಕಿಂಗ್ ಕಾಯ್ದೆಗೆ ತಿದ್ದುಪಡಿ ಮಸೂದೆಯು ಆಗಸ್ಟ್ 23 ಮತ್ತು 24ರಂದು ಚರ್ಚೆಗೆ ಬರಲಿದ್ದು, ಸರ್ಕಾರ ಈ ಕ್ರಮವನ್ನು ನಾವು ವಿರೋಧಿಸುತ್ತೇವೆ ಎನ್ನುತ್ತಾರೆ ಬ್ಯಾಂಕಿಂಗ್ ಯೂನಿಯನ್ ಒಕ್ಕೂಟ ವೇದಿಕೆಯ ಸಂಚಾಲಕರಾಗಿರುವ ರವಿ ಶೆಟ್ಟಿ.

ಬ್ಯಾಂಕ್‌ಗಳ  ಕಾರ್ಯವನ್ನು ಖಾಸಗಿಯವರಿಗೆ ಹೊರಗುತ್ತಿಗೆ ನೀಡುವುದು ಮತ್ತು ಕಾರ್ಮಿಕ ವಿರೋಧಿ ನೀತಿಯಂತಹ ಬ್ಯಾಂಕ್ ನೌಕರರ ಬಲವನ್ನು ಕುಗ್ಗಿಸುವ ಮತ್ತು ತೊಂದರೆಗೆ ಸಿಲುಕಿಸುವಂತಹ ಕ್ರಮಗಳನ್ನು ನಾವು ವಿರೋಧಿಸುತ್ತೇವೆ ಎಂದು ಶೆಟ್ಟಿ ಹೇಳಿದರು.

ಬ್ಯಾಂಕ್ ನೌಕರರ ಈ ಮುಷ್ಕರದಿಂದಾಗಿ ದೇಶವ್ಯಾಪಿ ವಿದೇಶಿ ವಿನಿಮಯ, ರಫ್ತು ಮತ್ತು ಆಮದು, ಚೆಕ್ ಕ್ಲಿಯರಿಂಗ್, ಲಾಕರ್ ಸೇವೆ ಸೇರಿದಂತೆ ಹಲವಾರು ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಇದರಿಂದಾಗಿ  ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.