ADVERTISEMENT

ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘನೆ

ಹೆಚ್ಚಿದ ಸೌಲಭ್ಯ, ಗುಣಮಟ್ಟದ ಆರೋಗ್ಯ ಸೇವೆ: 26 ವರ್ಷಗಳಲ್ಲಿ ಶೇ 77ರಷ್ಟು ಇಳಿಕೆ

ಪಿಟಿಐ
Published 10 ಜೂನ್ 2018, 19:43 IST
Last Updated 10 ಜೂನ್ 2018, 19:43 IST

ನವದೆಹಲಿ: ಹೆರಿಗೆ ಸಮಯದಲ್ಲಿ ತಾಯಂದಿರ ಮರಣ ಪ್ರಮಾಣವನ್ನು (ಎಂಎಂಆರ್‌) ಶೇ 77ರಷ್ಟು ಇಳಿಸಿದ ಭಾರತದ ಸಾಧನೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಬೆನ್ನು ತಟ್ಟಿದೆ.

ಹೆರಿಗೆ ಸಮಯದಲ್ಲಿ ಹೆಚ್ಚಾಗಿದ್ದ ತಾಯಂದಿರ ಮರಣ ಪ್ರಮಾಣವನ್ನು 26 ವರ್ಷಗಳಲ್ಲಿ ಶೇ77ರಷ್ಟು ನಿಯಂತ್ರಿಸಲಾಗಿದೆ. 1990ರಲ್ಲಿ ಹೆರಿಗೆ ಸಂದರ್ಭದಲ್ಲಿ ಒಂದು ಲಕ್ಷ ತಾಯಂದಿರ ಪೈಕಿ 556ರಷ್ಟಿದ್ದ ಸಾವಿನ ಸಂಖ್ಯೆ 2016ರ ವೇಳೆಗೆ 130ಕ್ಕೆ ತಗ್ಗಿದೆ.

ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ನಿಯಂತ್ರಣಕ್ಕೆ ವಿಶ್ವಸಂಸ್ಥೆ ‘ಸಹಸ್ರಮಾನದ ಅಭಿವೃದ್ಧಿ ಗುರಿ’ ಎಂಬ ಜಾಗತಿಕ ಕಾರ್ಯಸೂಚಿಯನ್ನು ರೂಪಿಸಿತ್ತು. ಅದರ ಅನ್ವಯ 2030ರ ಹೊತ್ತಿಗೆ ಮರಣ ಪ್ರಮಾಣವನ್ನು 70ಕ್ಕಿಂತ ಕಡಿಮೆಗೊಳಿಸುವ ಗುರಿ ಹೊಂದಲಾಗಿತ್ತು. ಸದ್ಯ ಭಾರತದ ಎಂಎಂಆರ್‌, ವಿಶ್ವಸಂಸ್ಥೆ ನಿಗದಿಗೊಳಿಸಿದ ಗುರಿಗಿಂತ ಕಡಿಮೆ ಇದೆ.

ADVERTISEMENT

ವಿಶ್ವಸಂಸ್ಥೆ ನಿಗದಿಪಡಿಸಿದ ಜಾಗತಿಕ ಗುರಿ ತಲುಪಲು ಭಾರತದ ಈ ಸಾಧನೆ ಪೂರಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕಿ ಪೂನಂ ಕೇತ್ರಪಾಲ್‌ ಸಿಂಗ್‌ ಶ್ಲಾಘಿಸಿದ್ದಾರೆ.

2005ರಿಂದ ಈಚೆಗೆ ದೇಶದಲ್ಲಿ ದೊರೆಯುತ್ತಿರುವ ಗುಣಮಟ್ಟದ ಆರೋಗ್ಯ ಸೇವೆಯಿಂದಾಗಿ ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯರ ಸಾವಿನ ಪ್ರಮಾಣ ಇಳಿಮುಖವಾಗಿದೆ ಎಂದು ಪೂನಂ ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.