ADVERTISEMENT

ಭಾರತದ ಕಂಪೆನಿಗಳಿಂದ ಇರಾನ್ ತೈಲ ಆಮದು ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

ನವದೆಹಲಿ (ಐಎಎನ್‌ಎಸ್): ಭಾರತದ ಕಂಪೆನಿಗಳು ಆಮದು ಮಾಡಿಕೊಳ್ಳುವ ತೈಲಕ್ಕೆ ಹಣದ ಬದಲಿಗೆ ಚಿನ್ನವನ್ನು ನೀಡುತ್ತಿರುವ ವದಂತಿಗಳನ್ನು ಇರಾನ್ ಅಲ್ಲಗಳೆದಿದೆ. ಎರಡೂ ದೇಶಗಳ ನಡುವಿನ ಒಪ್ಪಂದದನ್ವಯ `ಆಮದು ತೈಲಕ್ಕೆ ಶೇ 45ರಷ್ಟು ಭಾರತೀಯ ಕರೆನ್ಸಿಯಲ್ಲೇ ಹಣ ಪಾವತಿಯಾಗುತ್ತಿದೆ~ ಎಂದು ಅದು ಸ್ಪಷ್ಟಪಡಿಸಿದೆ.

ಈ ಸಂಬಂಧ ಮಂಗಳವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭಾರತದಲ್ಲಿರುವ ಇರಾನ್‌ನ ರಾಯಭಾರಿ ಸೈಯದ್ ಮೆಹ್ದಿ ನಬೀಜದ್ದೆಹ್ ಅವರು, `ಒಪ್ಪಂದ ಪ್ರಕಾರ ಎರಡೂ ದೇಶಗಳು ತೃಪ್ತವಾಗಿವೆ~ ಎಂದರು. `ಇರಾನ್ ರಫ್ತು ಮಾಡುವ ತೈಲಕ್ಕೆ ಭಾರತದಿಂದ ಹಣದ ಬದಲಿಗೆ ಚಿನ್ನವನ್ನು ಪಾವತಿಯಾಗಿ ಒಪ್ಪಿದೆಯೇ~ ಎಂಬ ಪ್ರಶ್ನೆಗೆ `ಚಿನ್ನ ಸೂಕ್ತವಲ್ಲ~ ಎಂದು ಉತ್ತರಿಸಿದರು. `ಇರಾನ್ ಭಾಗಶಃ ಹಣ ಪಾವತಿ ಒಪ್ಪಿಕೊಳ್ಳುವ ಮೂಲಕ ತನ್ನ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಬಹುದು~ ಎಂದೂ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಇರಾನ್ ಮೇಲೆ ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಹೊಸ ದಿಗ್ಬಂಧನ ವಿಧಿಸಿರುವ ಹಿನ್ನೆಲೆಯಲ್ಲಿ ಭಾರತವು ಇರಾನ್ ತೈಲಕ್ಕೆ ವಿವಿಧ ಮಾದರಿಯ ಪಾವತಿ ಕ್ರಮಗಳನ್ನು ಶೋಧಿಸುತ್ತಿದೆ. ಈ ಪಾವತಿ ವ್ಯವಸ್ಥೆಯ ಬಗ್ಗೆ ಚರ್ಚಿಸಲು ಕಳೆದ ತಿಂಗಳು ಬಹುಸಚಿವರ ತಂಡವೊಂದು ಇರಾನ್‌ಗೆ ಭೇಟಿ ನೀಡಿತ್ತು.

ದಿಗ್ಬಂಧನದ ನಡುವೆಯೂ ದೇಶದ ಇಂಧನ ಭದ್ರತೆಗೆ ಅತ್ಯವಶ್ಯವಾಗಿರುವ ತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತಿದ್ದು, ಇದರಲ್ಲಿ ಇರಾನ್ ಪಾಲು ಶೇ 12ರಷ್ಟು ಇದೆ. ಮುಂದೆಯೂ ಇರಾನ್‌ನಿಂದ ತೈಲ ಆಮದನ್ನು ಮಾಡಿಕೊಳ್ಳುವುದಾಗಿ ಭಾರತ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT