ADVERTISEMENT

ಭಾರತೀಯ ಯೋಧರ ಸಾಮರ್ಥ್ಯ ಹೊಗಳಲು ಅಮೆರಿಕ ಯೋಧನ ಚಿತ್ರ ಬಳಕೆ!

ಮತ್ತೆ ಹರಿದಾಡುತ್ತಿವೆ ಸುಳ್ಳು ಸುದ್ದಿ

ಏಜೆನ್ಸೀಸ್
Published 14 ಜುಲೈ 2017, 10:25 IST
Last Updated 14 ಜುಲೈ 2017, 10:25 IST
ಭಾರತೀಯ ಯೋಧರ ಸಾಮರ್ಥ್ಯ ಹೊಗಳಲು ಅಮೆರಿಕ ಯೋಧನ ಚಿತ್ರ ಬಳಕೆ!
ಭಾರತೀಯ ಯೋಧರ ಸಾಮರ್ಥ್ಯ ಹೊಗಳಲು ಅಮೆರಿಕ ಯೋಧನ ಚಿತ್ರ ಬಳಕೆ!   

ನವದೆಹಲಿ: ‘ಈ ದಿಟ್ಟ ಭಾರತೀಯ ಯೋಧನ ಕಾಲುಗಳು ಸಿಯಾಚಿನ್‌ನ ಹಿಮದಿಂದ ಗಾಯಗೊಂಡಿವೆ. ಆದರೂ ಈ ಸೈನಿಕ ತನ್ನ ಮುಖದಲ್ಲಿ ನಗು ಉಳಿಸಿಕೊಂಡಿದ್ದಾರೆ. ಭಾರತೀಯ ಸೇನೆಗೆ ಜಯವಾಗಲಿ

– ಬೊಬ್ಬೆಯೊಡೆದಂತಹ ಅಂಗಾಲುಗಳನ್ನು ತೋರಿಸುತ್ತ ಯೋಧ ನಗುತ್ತಿರುವ ಚಿತ್ರದೊಂದಿಗೆ ಈ ರೀತಿಯ ಬರಹವುಳ್ಳ ಕಾರ್ಡ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಈ ಚಿತ್ರದ ಅಸಲಿಯತ್ತು ಬೇರೆಯೇ ಇದೆ.

ಭಾರತೀಯ ಸೇನೆ ಹಾಗೂ ಭಾರತದ ಸೈನಿಕರ ಸಾಮರ್ಥ್ಯ ಹೊಗಳಲು ಈ ಅಮೆರಿಕದ ಯೋಧನ ಚಿತ್ರವನ್ನು ಈ ಕಾರ್ಡ್‌ನಲ್ಲಿ ಬಳಸಿಕೊಳ್ಳಲಾಗಿದೆ.

ADVERTISEMENT

ಅಮೆರಿಕ ಸೇನೆಯ ಜಲಾಂತರ್ಗಾಮಿ ನೌಕೆಯ ಯೋಧ ಸೀನ್‌ ಸಿಂಪ್ಸನ್‌ ಗಾಯಗೊಂಡಿರುವ ತಮ್ಮ ಕಾಲುಗಳ ಚಿತ್ರವನ್ನು 2016 ಸೆಪ್ಟೆಂಬರ್‌ 15ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಯಾವುದೋ ಚಿತ್ರಕ್ಕೆ ಇನ್ಯಾವುದೋ ವಿಷಯ ಬೆಸೆದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಡುವ ಈ ರೀತಿಯ ಪರಿಪಾಠಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಭಾರತೀಯ ಯೋಧರ ಸಾಮರ್ಥ್ಯ ತೋರಿಸಲು ಅಮೆರಿಕದ ಯೋಧರ ಚಿತ್ರ ಬಳಸುವ ಅಗತ್ಯವೇನಿತ್ತು’ ಎಂದು ಕೆಲವರು ಪ್ರಶ್ನಿಸಿದರೆ, ‘ಭಾರತೀಯ ಯೋಧರ ಚಿತ್ರವನ್ನೇ ತೆಗೆದು ಸಾಮರ್ಥ್ಯ ಸಾಬೀತು ಮಾಡಬಹುದಿತ್ತಲ್ಲ?’ ಎಂದು ಕೆಲವರು ಕೇಳಿದ್ದಾರೆ.

‘ಇಂತಹ ಸುಳ್ಳು ಸುದ್ದಿಗಳನ್ನು ಸೃಷ್ಟಿಸುವವರಿಗೆ ಭಾರತೀಯ ಸೈನಿಕರ ಬಗ್ಗೆ ಒಂದಿಷ್ಟೂ ಗೌರವವಿಲ್ಲ’ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.