ADVERTISEMENT

ಭಾರತ್ ಬಂದ್ ವೇಳೆ ದಲಿತರು ಎಸ್‌ಐ ಹತ್ಯೆ ಮಾಡಿಲ್ಲ: ವೈರಲ್ ಆಗಿದ್ದ ಚಿತ್ರಗಳು ನಕಲಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 7:35 IST
Last Updated 5 ಏಪ್ರಿಲ್ 2018, 7:35 IST
ದಲಿತರು ಎಸ್‌ಐ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಫೇಸ್‌ಬುಕ್‌ನಲ್ಲಿ ಪ್ರಕಟವಾಗಿದ್ದವುಗಳಲ್ಲಿ ಮೊದಲನೆಯ ಚಿತ್ರ
ದಲಿತರು ಎಸ್‌ಐ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಫೇಸ್‌ಬುಕ್‌ನಲ್ಲಿ ಪ್ರಕಟವಾಗಿದ್ದವುಗಳಲ್ಲಿ ಮೊದಲನೆಯ ಚಿತ್ರ   

ಜೋಧಪುರ: ‘ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ–1989’ ದುರ್ಬಲಗೊಳಿಸಿರುವುದನ್ನು ವಿರೋಧಿಸಿ ಏಪ್ರಿಲ್ 2ರಂದು ನಡೆದಿದ್ದ ಭಾರತ್ ಬಂದ್ ವೇಳೆ ದಲಿತರು ಇಲ್ಲಿನ ಎಸ್‌ಐಯೊಬ್ಬರನ್ನು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಸುಳ್ಳೆಂಬುದು ತಿಳಿದು ಬಂದಿದೆ.

ಎಸ್‌ಐ ಹತ್ಯೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಚಿತ್ರಗಳು ನಕಲಿ. ಅವು 2017ರಲ್ಲಿ ಉತ್ತರ ಪ್ರದೇಶದಲ್ಲಿ ಪೊಲೀಸರೊಬ್ಬರ ಮೇಲೆ ನಡೆದಿದ್ದ ಹಲ್ಲೆಯ ಚಿತ್ರಗಳು ಎಂಬುದು ಬಯಲಾಗಿದೆ.

‘ಜೋಧಪುರ ಜಿಲ್ಲೆಯ ಸಬ್‌–ಇನ್‌ಸ್ಪೆಕ್ಟರ್ ಮಹೇಂದ್ರ ಚೌಧರಿ ಅವರನ್ನು ದಲಿತರು ಹೊಡೆದು ಕೊಂದಿದ್ದಾರೆ. ಇದುವೇ ಭಾರತ ಬಂದ್? ಇದನ್ನು ವ್ಯಾಪಕವಾಗಿ ಶೇರ್ ಮಾಡಿ’ ಎಂಬ ಸಂದೇಶದ ಜತೆಗೆ ಮೂರು ಫೋಟೊಗಳನ್ನು ಪ್ರಕಟಿಸಲಾಗಿತ್ತು. ಇದು ‘ಖಟ್ಟರ್ ಹಿಂದೂ ಭಗವಾ ರಾಜ್’ ಎಂಬ ಫೇಸ್‌ಬುಕ್ ಪುಟದಲ್ಲಿ ಪ್ರಕಟಗೊಂಡಿತ್ತು. ಈ ಪುಟಕ್ಕೆ 35 ಲಕ್ಷದಷ್ಟು ಫಾಲೋವರ್‌ಗಳಿದ್ದು, ಇದುವರೆಗೆ ಸಂದೇಶ ಸುಮಾರು 70 ಸಾವಿರ ಶೇರ್ ಆಗಿದೆ.

ADVERTISEMENT

39 ಲಕ್ಷ ಫಾಲೋವರ್‌ಗಳಿರುವ ‘ಭಾರತ್‌ ಕಿ ಆವಾಜ್‌’ ಮತ್ತು 66 ಲಕ್ಷ ಫಾಲೋವರ್‌ಗಳಿರುವ ‘ಏಕ್ ನಾಮ್ ಹಿಂದೂಸ್ತಾನ್’ ಎಂಬ ಫೇಸ್‌ಬುಕ್ ಪುಟಗಳಲ್ಲಿಯೂ ಸಂದೇಶ ಪ್ರಕಟವಾಗಿತ್ತು. ಫೇಸ್‌ಬುಕ್‌ ಪುಟಗಳು ಮಾತ್ರವಲ್ಲದೆ ಲಕ್ಷಾಂತರ ಮಂದಿ ಇದನ್ನು ಶೇರ್ ಮಾಡಿದ್ದರು.

ಸಂದೇಶದ ಜತೆ ಲಗತ್ತಿಸಿರುವ ಫೋಟೊಗಳು 2017ರ ಜೂನ್‌ನಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಘಟನೆಗೆ ಸಂಬಂಧಿಸಿದ್ದು ಎಂದು ಆಲ್ಟ್‌ ನ್ಯೂಸ್ ವರದಿ ಮಾಡಿದೆ.

ಡೈಲಿ ಮೇಲ್ ವರದಿಯ ಪ್ರಕಾರ, ಉತ್ತರ ಪ್ರದೇಶದ ಕಾನ್ಪುರದ ಜಾಗೃತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿತ್ತು. ಇದರ ವಿರುದ್ಧ ನಡೆದಿದ್ದ ಪ್ರತಿಭಟನೆ ಹಿಂಸಾಚಾರ ರೂಪ ತಾಳಿದ್ದು, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಪ್ರತಿಭಟನಾನಿರತರು ಹಲ್ಲೆ ನಡೆಸಿದ್ದರು.

ಆ ಘಟನೆಯ ಫೋಟೊವನ್ನೇ ದಲಿತರ ವಿರುದ್ಧ ಮಾಡಲಾಗಿರುವ ಆರೋಪಕ್ಕೆ ಬಳಸಿರುವುದು ಈಗ ಬೆಳಕಿಗೆ ಬಂದಿದೆ.

ಮಹೇಂದ್ರ ಚೌಧರಿ ಮೃತಪಟ್ಟದ್ದು ಹೃದಯಾಘಾತದಿಂದ: ಭಾರತ್ ಬಂದ್ ವೇಳೆ, ಏಪ್ರಿಲ್‌ 3ರಂದು ಕರ್ತವ್ಯದಲ್ಲಿದ್ದ ಎಸ್‌ಐ ಮಹೇಂದ್ರ ಚೌಧರಿ ಮೃತಪಟ್ಟಿರುವುದು ಹೃದಯಾಘಾತದಿಂದ ಎಂದು ನ್ಯೂಸ್18 ಜಾಲತಾಣ ವರದಿ ಮಾಡಿದೆ. ಕರ್ತವ್ಯದ ವೇಳೆ ಹೃದಯಾಘಾತಕ್ಕೊಳಗಾದ ಅವರನ್ನು ಜೋಧಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಅಹಮದಾಬಾದ್‌ಗೆ ಕರೆದೊಯ್ಯುವಂತೆ ಶಿಫಾರಸು ಮಾಡಲಾಗಿತ್ತು. ಅಹಮದಾಬಾದ್‌ಗೆ ಕರೆದೊಯ್ಯುತ್ತಿದ್ದಾಗ ಅವರು ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.