ADVERTISEMENT

ಭಿಕ್ಷೆ ಬೇಡಲು ಅನುಮತಿ: ಕಾನ್‌ಸ್ಟೆಬಲ್‌ ಮನವಿ

ಪಿಟಿಐ
Published 10 ಮೇ 2018, 19:30 IST
Last Updated 10 ಮೇ 2018, 19:30 IST

ಮುಂಬೈ: ‘ಎರಡು ತಿಂಗಳಿಂದ ವೇತನ ನೀಡದ ಕಾರಣ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಸಮವಸ್ತ್ರ ಧರಿಸಿಯೇ ಭಿಕ್ಷೆ ಬೇಡಲು ಅನುಮತಿ ನೀಡಬೇಕು’ ಎಂದು ಇಲ್ಲಿನ ಕಾನ್‌ಸ್ಟೆಬಲ್‌ ಒಬ್ಬರು ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ಪೊಲೀಸ್‌ ಆಯುಕ್ತ ದತ್ತ ಪಡಸಗಿಕರ್‌ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿರುವ ಕಾನ್‌ಸ್ಟೆಬಲ್ ಧ್ಯಾನೇಶ್ವರ್ ಅಹಿರಾವ್‌, ‘ಕಾಯಿಲೆಗೆ ತುತ್ತಾಗಿರುವ ಪತ್ನಿಯ ವೈದ್ಯಕೀಯ ಹಾಗೂ ಕುಟುಂಬದ ಇತರ ವೆಚ್ಚಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದೊದಗಿದೆ’ ಎಂದು ವಿವರಿಸಿದ್ದಾರೆ. ಧ್ಯಾನೇಶ್ವರ್‌ ಅವರನ್ನು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ನಿವಾಸ ಮಾತೋಶ್ರೀಯ ಭದ್ರತಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ.

‘ಮಾರ್ಚ್‌ 20ರಿಂದ 22ರವರೆಗೆ ರಜೆ ಪಡೆದಿದ್ದೆ. ಆದರೆ, ಪತ್ನಿಯ ಕಾಲು ಮುರಿದ ಕಾರಣ ರಜೆ ಮುಗಿದ ನಂತರ ಕರ್ತವ್ಯಕ್ಕೆ ಹಾಜರಾಗಲು ಆಗಲಿಲ್ಲ. ಬದಲಾಗಿ ಮಾರ್ಚ್‌ 28ರಂದು ಹಾಜರಾದೆ’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ADVERTISEMENT

‘ಐದು ದಿನ ರಜೆ ತೆಗೆದುಕೊಳ್ಳುತ್ತಿರುವ ಕುರಿತು ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದ್ದೆ’ ಎಂಬುದಾಗಿ ಧ್ಯಾನೇಶ್ವರ್ ತಿಳಿಸಿದ್ದಾರೆ.

‘ಇದಾದ ಬಳಿಕ ನನಗೆ ವೇತನ ಪಾವತಿ ಸ್ಥಗಿತಗೊಂಡಿದೆ’ ಎಂದೂ ವಿವರಿಸಿರುವ ಅವರು, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.